ಅಯೋಧ್ಯೆ ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣ : ಜನವರಿ 2024ಕ್ಕೆ ಲೋಕಾರ್ಪಣೆ

ಅಯೋಧ್ಯೆ : (Ayodhya Ram Mandir Lokarpane) ರಾಮಮಂದಿರದ ಸುಮಾರು ಶೇ 70 ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2024 ರ ಜನವರಿ ಮೂರನೇ ವಾರದೊಳಗೆ ರಾಮ ದೇವಾಲಯದ ಗರ್ಭಗುಡಿಯಲ್ಲಿ ಸಿಂಹಾಸನಾರೋಹಣ ಮಾಡಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಜನವರಿ 14-15, 2024 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದೇವರನ್ನು ಪೂಜಿಸಲು ಭಕ್ತರಿಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ಶ್ರೀ ಮಣಿರಾಮ್ ದಾಸ್ ಚವಾನಿಯ (ಅಯೋಧ್ಯೆ) ಟ್ರಸ್ಟ್ ಸದಸ್ಯ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ಉದ್ಘಾಟನೆಯ ಆಚರಣೆಗಳು ಡಿಸೆಂಬರ್ 2023 ರಲ್ಲಿ ಪ್ರಾರಂಭವಾಗುತ್ತವೆ. ರಾಮಮಂದಿರ ನಿರ್ಮಾಣವು ಆಗಸ್ಟ್ 2020 ರಲ್ಲಿ ಪ್ರಾರಂಭವಾದ ನಂತರ ಮೊದಲ ಬಾರಿಗೆ, ದೇವಾಲಯದ ಟ್ರಸ್ಟ್ ಮತ್ತು ರಾಜ್ಯ ಸರ್ಕಾರವು ನಗರದಲ್ಲಿ ಭವ್ಯವಾದ ರಾಮನವಮಿ ಆಚರಣೆಗಳನ್ನು ಯೋಜಿಸುತ್ತಿದೆ. ರಾಮಮಂದಿರದ ಉದ್ಘಾಟನೆಗೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ ಎಂದು ಅಯೋಧ್ಯೆಯ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ. ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ರಾಮಮಂದಿರವನ್ನು 2024 ರ ಜನವರಿ ಮೂರನೇ ವಾರದೊಳಗೆ ಭಕ್ತರಿಗೆ ತೆರೆಯಲಾಗುವುದು ಎಂದು ಹೇಳಿದ್ದಾರೆ.

ವಿಶ್ವಹಿಂದೂಪರಿಷತ್ ರಾಮಜನ್ಮಭೂಮಿಯ ಶಿಲಾನ್ಯಾಸವನ್ನು ನಡೆಸಲು 1980 ರ ದಶಕದಲ್ಲಿ ಪ್ರಯತ್ನಗಳನ್ನು ಆರಂಭಿಸಿತು. ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠ ಶಿಲಾನ್ಯಾಸಕ್ಕೆ ತಡೆಯಾಜ್ಞೆಯನ್ನು ನೀಡಿತು. ನಂತರ ವಿವಾದಿತವಲ್ಲದ ಜಾಗದಲ್ಲಿ ಶಿಲಾನ್ಯಾಸ ನಡೆಸಲು ಅನುಮತಿ ನೀಡಲಾಯಿತು. ಆಗಿನ ಗೃಹಸಚಿವ ಬೂಟಾಸಿಂಗ್ ವಿ.ಹೆಚ್ ಪಿ ನಾಯಕ ಅಶೋಕ ಸಿಂಘಲ್ ರಿಗೆ ಔಪಚಾರಿಕವಾಗಿ ಅನುಮತಿ ನೀಡಿದರು. ಮುಂದಿನ ದಿನಗಳಲ್ಲಿ ವಿವಾದಾತ್ಮಕ ಭೂಮಿಯ ಕುರಿತಾಗಿ ಸುದೀರ್ಘ ಕಾನೂನು ವಿವಾದಗಳು ನಡೆದವು. ನಂತರ ಅಯೋಧ್ಯೆ ವಿವಾದದ ಕುರಿತು 2019 ನವಂಬರ್ 9 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ವಿವಾದಿತ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು.

ಇದನ್ನೂ ಓದಿ : National Vaccination Day : ಭಾರತದಲ್ಲಿ ಲಸಿಕಾ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೇನು ಗೊತ್ತಾ?

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾರ್ಚ್ 2020 ರಲ್ಲಿ ರಾಮ್ ದೇವಾಲಯದ ಮೊದಲ ಹಂತದ ನಿರ್ಮಾಣವನ್ನು ಪ್ರಾರಂಭಿಸಿತು. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಂಡು, 5 ಆಗಸ್ಟ್ 2020 ರಂದು ಶಿಲಾನ್ಯಾಸದ ನಂತರ ಅಧಿಕೃತವಾಗಿ ದೇವಾಲಯದ ನಿರ್ಮಾಣವು ಮತ್ತೆ ಪ್ರಾರಂಭವಾಯಿತು. ಮೂರು ದಿನಗಳ ಕಾಲ ಸುದೀರ್ಘವಾದ ವೈದಿಕ ಆಚರಣೆಗಳನ್ನು ನಡೆಸಿ ಶಿಲಾನ್ಯಾಸ ನಡೆಸಲಾಯಿತು. ಇದೀಗ ಅಯೋಧ್ಯೆಯ ರಾಮಮಂದಿರದ ಶೇ. 70 ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಸಾರ್ವಜನಿಕವಾಗಿ ದೇವಾಲಯದ ಧ್ವಾರಗಳನ್ನು ತೆರೆಯಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

Ayodhya Ram Mandir Lokarpane: Ayodhya Ram Mandir construction almost complete: Lokarpane by January 2024

Comments are closed.