First Voter Of India: ಭಾರತದ ಮೊದಲ ಮತದಾರ ಯಾರು ಗೊತ್ತಾ?

ಭಾರತೀಯ ಚುನಾವಣಾ ಆಯೋಗವು 2007ರಲ್ಲಿ, ಹಿಮಾಚಲ ಪ್ರದೇಶದ ಕಿಂನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಶರಣ್ ನೇಗಿ (Shyam Saran Negi) ಅವರು “ಭಾರತದ ಮೊದಲ ಮತದಾರ”( First Voter Of India) ಎಂದು ಪತ್ತೆ ಹಚ್ಚಿದೆ. ಸ್ವತಂತ್ರ ಭಾರತದ ಮೊದಲ ಚುನಾವಣೆ 1952ರಲ್ಲಿ ನಡೆದಾಗ ಮೊತ್ತ ಮೊದಲ ಮತ ಚಲಾವಣೆ ಮಾಡಿದವರು ನೇಗಿ. ಹಿಮಪಾತದ ಕಾರಣದಿಂದಾಗಿ, ಐದು ತಿಂಗಳ ಮೊದಲೇ ಅಂದರೆ 1951 ಸೆಪ್ಟೆಂಬರ್ ತಿಂಗಳಲ್ಲಿ ಕಿಂನೌರ್ ನಲ್ಲಿ ಮತದಾನ ನಡೆದಿತ್ತು. ನೇಗಿಯವರು ವೃತ್ತಿಯಲ್ಲಿ ಶಿಕ್ಷಕರಾದ ಕಾರಣ ಚುನಾವಣಾ ಕರ್ತವ್ಯಕ್ಕೂ ಹಾಜರಗಬೇಕಿತ್ತು. ಹೀಗಾಗಿ ಬೆಳಗ್ಗೆ ಮತದಾನ ಮಾಡಿಯೇ ಚುನಾವಣೆಗೆ ಹಾಜರಾಗಿದ್ದರು. ಇದರಿಂದಾಗಿ ನೇಗಿ, ಮೊತ್ತ ಮೊದಲ ಮತ ಚಲಾಯಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಂದೂ ಮತದಾನ ತಪ್ಪಿಸಿಲ್ಲ
ನೇಗಿ ಅವರು ಜುಲೈ 1, 1917ರಲ್ಲಿ ಕಲ್ಪಾ ಗ್ರಾಮದಲ್ಲಿ ಜನಿಸಿದರು. ವೃತ್ತಿಯಲ್ಲಿ ಸರಕಾರಿ ಶಾಲೆಯಾಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಅಷ್ಟೇ ಅಲ್ಲದೆ, ಮೊದಲ ಚುನಾವಣೆಗಾಗಿ ಕೆಲಸ ಕೂಡ ಮಾಡಿದ್ದಾರೆ. ನೇಗಿ ತಮ್ಮ 10 ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದರು. ಅವರು ತಮ್ಮ 5 ನೇ ತರಗತಿಯವರೆಗೆ ಕಲ್ಪಾದಲ್ಲಿನ ಸಾರ್ವಜನಿಕ ಶಾಲೆಯಲ್ಲಿ ಓದಿದರು. ಮತ್ತು ಮುಂದಿನ ಶಿಕ್ಷಣವನ್ನು ಮುಂದುವರಿಸಲು ರಾಂಪುರಕ್ಕೆ ತೆರಳಿದರು. 10ನೇ ತರಗತಿಗೆ ತಲುಪುವ ವೇಳೆಗೆ 20 ವರ್ಷ ತುಂಬಿದ್ದ ಅವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ 10ನೇ ತರಗತಿಗೆ ಪ್ರವೇಶ ನಿರಾಕರಿಸಲಾಗಿತ್ತು. ಶಾಲಾ ಶಿಕ್ಷಣ ಮುಗಿದ ನಂತರ ನೇಗಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಸೇರಿಕೊಂಡರು. ಅವರು 1940-1946 ರ ಅವಧಿಯಲ್ಲಿ 6 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. ಶ್ಯಾಮ್ ಸರನ್ ನಂತರ ಕಲ್ಪದ ಲೋವರ್ ಮಿಡಲ್ ಸ್ಕೂಲ್‌ನಲ್ಲಿ ಜೂನಿಯರ್ ಬೇಸಿಕ್ ಶಿಕ್ಷಕರಾಗಿ ಕೆಲಸ ಮಾಡಿದರು ಮತ್ತು 23 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ ಅವರು 1975 ರಲ್ಲಿ ತಮ್ಮ ಹುದ್ದೆಯಿಂದ ನಿವೃತ್ತರಾದರು.

1951 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮೊದಲ ಮತ ಚಲಾಯಿಸಿದಾಗ ಅವರಿಗೆ 33 ವರ್ಷ ವಯಸ್ಸಾಗಿತ್ತು. 19 ಮೇ 2019 ರಂದು, ಅವರು ಹಿಮಾಚಲ ಪ್ರದೇಶದ ಸಾರ್ವತ್ರಿಕ ಚುನಾವಣೆಯಲ್ಲಿ 17 ನೇ ಬಾರಿಗೆ ಮತ ಚಲಾಯಿಸಿದರು. ನೇಗಿ ಅವರು 2007 ರಲ್ಲಿ ಚುನಾವಣಾ ಆಯೋಗವು ಸ್ವತಂತ್ರ ಭಾರತದ ಮೊದಲ ಮತದಾರ ಎಂದು ಗುರುತಿಸುವವರೆಗೂ ಸಾಮಾನ್ಯ ಮತದಾರರಾಗಿದ್ದರು. 2010 ರಲ್ಲಿ, ಅಂದಿನ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಅವರು ಚುನಾವಣಾ ಆಯೋಗದ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಶ್ಯಾಮ್ ಸರನ್ ಅವರ ಗ್ರಾಮಕ್ಕೆ ಅವರನ್ನು ಗೌರವಿಸಲು ಭೇಟಿ ನೀಡಿದ್ದರು.

ಮಾಧ್ಯಮಗಳಲ್ಲೂ ಕಾಣಿಸಿಕೊಂಡ ನೇಗಿ
2014 ರಲ್ಲಿ, ಗೂಗಲ್ ಇಂಡಿಯಾದಿಂದ ವೀಡಿಯೊವನ್ನು ಮಾಡಲಾಗಿತ್ತು, ಇದರಲ್ಲಿ ಶ್ಯಾಮ್ ಸರಣ್ ಅವರು ಮೊದಲ ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ಹೇಳಿದರು ಮತ್ತು ವೀಕ್ಷಕರಿಗೆ ಮತದಾನದ ಮಹತ್ವವನ್ನು ಸಹ ಹೇಳಿದರು. 2016 ರಲ್ಲಿ, ಯಾಮಿ ಗೌತಮ್, ಪುಲ್ಕಿತ್ ಸಾಮ್ರಾಟ್ ಮತ್ತು ಊರ್ವಶಿ ರೌಟೇಲಾ ನಟಿಸಿದ “ಸನಮ್ ರೇ” ಚಿತ್ರದಲ್ಲಿ ನೇಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Hijab Row WhatsApp Status: ವಾಟ್ಸಾಪ್ ಸ್ಟೇಟಸ್ ಹಾಕೋ ಮುನ್ನ ಎಚ್ಚರ; ರೌಡಿ ಶೀಟರ್ ಕೇಸ್ ಬೀಳಬಹುದು ಹುಷಾರು

(First Voter Of India Shyam Saran Negi life)

Comments are closed.