Guru Purnima : ಗುರು ಪೂರ್ಣಿಮೆ ಮಹತ್ವ

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ” (Guru Purnima ). ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ. ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಿದೆ. ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ, ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.

ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ. ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.

ಆದಿ ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದಪುನರ್ಸ್ಥಾಪನೆ ಮತ್ತು ಪ್ರಚಾರ ಕಾರ್ಯಕ್ಕಾಗಿಯೇ ಬಂದವರು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ.ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು.ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ಅಂತಹ ಗುರುವಿಗೆ “ಗುರು ಪೂರ್ಣಿಮೆ’ಯ ಶುಭಾಶಯಗಳು.

ಇದನ್ನೂ ಓದಿ: Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !

ಇದನ್ನೂ ಓದಿ: Wednesday Astrology : ಹೇಗಿದೆ ಬುಧವಾರದ ದಿನಭವಿಷ್ಯ

(Guru Purnima : Understand the Importance!)

Comments are closed.