Halu Rameshwara Temple : ಪುರಾಣ ಪ್ರಸಿದ್ಧ ತಾಣ ಹಾಲು ರಾಮೇಶ್ವರ

Halu Rameshwara Temple : ಪ್ರಯಾಣ ಮಾಡೋದು, ಹೊಸ ಹೊಸ ಜಾಗಗಳನ್ನು ನೋಡೋದು ಅಂದ್ರೆ ಒಂದು ರೀತಿ ಬೇರೇನೇ ಮಜಾ ಅಲ್ವಾ! ಅದ್ರಲ್ಲೂ ನಮ್ಮ ಕರ್ನಾಟಕವಂತು ಸಾಹಿತ್ಯ- ಸಂಸ್ಕೃತಿಯ ಸಮೃಧ್ಧ ನಾಡು. ಸಂಪದ್ಭರಿತ ಕಾಡು, ಧುಮ್ಮಿಕ್ಕಿ ಹರಿಯುವ ಜಲಪಾತ, ಮನಸೆಳೆಯುವ ಕರಾವಳಿ ತೀರ, ಮನಸ್ಸಿಗೆ ಮುದ ನೀಡುವ ಅದೆಷ್ಟೋ ಸುಂದರ ತಾಣಗಳು, ಸಾವಿರಾರು ದುರ್ಗಗಳು, ಗುಡಿ-ಗೋಪುರಗಳು ಹೀಗೇ ಹಲವಾರು ವಿವಿಧತೆಯೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಿದೆ. ಇದರ ಜೊತೆ ಜೊತೆಗೆ ಅದೆಷ್ಟೋ ಪುರಾತನ ದೇವಾಲಯಗಳು, ಅದರ ಮಹತ್ವಪೂರ್ಣ ಇತಿಹಾಸದ ಕಥೆಗಳು ಹೀಗೆ ವೈಶಿಷ್ಟ್ಯತೆಗಳನ್ನು ಹೊಂದಿದೆ. ಹಲವು ಬಾರಿ ಕೆಲವೊಂದು ಜಾಗವನ್ನು ನೋಡಿದ್ರೆ ಮಾನಸ್ಸಿಗೆ ಹಿತ ನೀಡುತ್ತದೆ ಜೊತೆಗೆ ಮನಸ್ಸಿನಲ್ಲಿ ಭಕ್ತಿಯ ಭಾವನೆಯನ್ನು ಮೂಡಿಸುತ್ತದೆ.

ಇಂತಹದ್ದೇ ಬಹಳ ವಿಶಿಷ್ಟವಾಗಿ ಸಾವಿರಾರು ವರ್ಷಗಳ ಇತಿಹಾಸವನ್ನು  ಹೊಂದಿರುವಂತಹ ದೇವಾಲಯ ಎಂದರೆ ಹಾಲು ರಾಮೇಶ್ವರ. ಪುರಾಣ ಪ್ರಸಿದ್ಧ ಹಾಲು ರಾಮೇಶ್ವರ ದೇವಸ್ಥಾನ ಅಪಾರ ಭಕ್ತಾದಿಗಳ ನೆಚ್ಚಿನ ತಾಣ ಅಂತಾನೆ ಹೇಳಬಹುದು. ಕೋಟೆಯ ನಾಡು ಎಂದೇ ಖ್ಯಾತವಾಗಿರುವ ಚಿತ್ರದುರ್ಗದಿಂದ (Chitradurga) ಸುಮಾರು 52 ಕಿ. ಮೀ ದೂರ ಹೋದಮೇಲೆ, ಹೊಸದುರ್ಗ (Hosadurga) ಎನ್ನುವ ಊರು ಸಿಗುತ್ತದೆ. ಅಲ್ಲಿ ಬಹುತೇಕ ಎಲ್ಲರಿಗೂ ಈ ದೇವಸ್ಥಾನ ಹಾಗೂ ಅದರ ಇತಿಹಾಸ ಎಲ್ಲವೂ ಗೊತ್ತು. ಅತ್ಯಂತ ಹಳೆ ಕಾಲದ ಕಲ್ಲಿನ ದೇವಸ್ಥಾನ ಇದಾಗಿದ್ದು ಬಹು ಸುಂದರ ಕೆತ್ತನೆಗಳನ್ನು ಒಳಗೊಂಡಿದೆ. ದೇವಸ್ಥಾನದಲ್ಲಿ ಒಟ್ಟು ಮೂರು ವಿಗ್ರಹಗಳು ಕಾಣಸಿಗುತ್ತದೆ. ಒಂದು ರಾಮೇಶ್ವರ ವಿಗ್ರಹ ಅದರ ಜೊತೆಗೆ ಪತ್ನಿ ಗಂಗಾದೇವಿ ಹಾಗೂ ಸುದತಿ ದೇವಿ ಮೂರ್ತಿ. ಬಹಳ ಸುಂದರವಾದ ಮೂರ್ತಿ ಕೆತ್ತನೆ ಇದಾಗಿದ್ದು, ಇದರ ಹಿಂದಿನ ಇತಿಹಾಸವು ಅಷ್ಟೇ ಸೊಗಸಾಗಿದೆ.

ಹಾಲು ರಾಮೇಶ್ವರ ದೇವಸ್ಥಾನದ ಇತಿಹಾಸ

ಸಾಮಾನ್ಯವಾಗಿ ಅಲ್ಲಿನ ಸ್ಥಳೀಯರನ್ನು ಕೇಳಿದ್ರೆ ಈ ದೇವಸ್ಥಾನದ ಹುಟ್ಟಿನ ಬಗ್ಗೆ ಎರಡು ಕಥೆಗಳನ್ನು ಹೇಳ್ತಾರೆ. ಅದರಲ್ಲಿ ಒಂದು ಕಥೆ ಎಂದರೆ ಹಿಂದೆ ವಾಲ್ಮೀಕಿ ಮಹರ್ಷಿಯ ಪತ್ನಿ ಸುದತಿ ದೇವಿ ಕಾಶಿಯ ಗಂಗೆಯಲ್ಲಿ ಬಾಗೀನ ಬಿಟ್ಟಿದ್ದರಂತೆ, ಆ ಬಾಗೀನ ಹೊಸದುರ್ಗದ ಹಾಲು ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಹುತ್ತದಲ್ಲಿ ಕಾಣಿಸಿಕೊಂಡಿತ್ತಂತೆ, ಸ್ವಲ್ಪ ಸಮಯದಲ್ಲಿ ಅದೇ ಹುತ್ತದಿಂದ ನೀರು ಕೂಡ ಕಾಣಿಸಿತ್ತಂತೆ, ಹೀಗಾಗಿ ಅಂದಿನಿಂದ ಈ ಸ್ಥಳವನ್ನು ಗಂಗಾಕೊಳ ಎಂದು ಕರೆಯುತ್ತಾರೆ. ಇದ್ರ ಜೊತೆಗೆ ಈ ಸ್ಥಳದ ವಿಶೇಷತೆ ಏನು ಅಂದ್ರೆ ನಮ್ಮ ಮನಸ್ಸಿನಲ್ಲಿ ಏನಾದ್ರೂ ಆಸೆಯನ್ನು ಇಟ್ಟುಕೊಂಡು ಇಲ್ಲಿ ಬಂದು ಪೂಜೆ ಮಾಡಿದ್ರೆ ನಿಮಿಷದೊಳಗೆ ನಾವು ಅಂದುಕೊಂಡದ್ದು ನಡೆಯುತ್ತಾ ಇಲ್ಲವಾ ಎಂದು ತಿಳಿಯುತ್ತೆ.

ವಿಶೇಷತೆ ಏನು?

ಅರೆ! ಇದೇನಪ್ಪಾ ಆಶ್ಚರ್ಯ ಅಂತ ಅನಿಸೋದು ಸಹಜ. ಹೌದು ಮನಸ್ಸಿನಲ್ಲಿ ಏನಾದರೂ ಕಾಮನೆಯನ್ನು ಇಟ್ಟುಕೊಂಡು ಈ ಕೊಳದ ಬಳಿ ಕುಳಿತರೆ, ಕೊಳದಿಂದ ಬಾಳೆಹಣ್ಣು, ಶಂಖ, ತೆಂಗಿನಕಾಯಿ, ಹೂವು ಈ ರೀತಿಯ ವಸ್ತುಗಳು ಸಿಕ್ಕಿದ್ರೆ ನಾವು ಅಂದುಕೊಂಡದ್ದು ಆಗತ್ತೆ ಅಂತ ಅರ್ಥ. ಅದೇ ರೀತಿ ಇದಕ್ಕೆ ತದ್ವಿರುದ್ಧವಾಗಿ  ಬಾಳೆ ಹಣ್ಣಿನ ಸಿಪ್ಪೆ, ತೆಂಗಿನ ಚಿಪ್ಪು, ಕೂದಲು ಈ ರೀತಿಯಾದದ್ದು ಸಿಕ್ಕಿದ್ರೆ ನಮ್ಮ ಕೋರಿಕೆ ಈಡೇರಲ್ಲ ಎಂದರ್ಥ. ಹೀಗೆ ವಿಶೇಷವಾಗಿ, ನಂಬಿದ ಭಕ್ತರ ಗೊಂದಲಗಳಿಗೆ ಗಂಗಾಮಾತೆ ಪರಿಹಾರ ನೀಡ್ತಾ ಇದ್ದಾಳೆ. ಇದೆಲ್ಲ ಬರೀ ಕಟ್ಟು ಕಥೆ ಇದನ್ನೆಲ್ಲ ಹೇಗೆ ನಂಬೋದು ಅನ್ನುವವರಿಗೂ ನಂಬುವಂತೇ ಇತಿಹಾಸದ ಪುಟದಲ್ಲಿಯೂ ಈ ಕುರಿತು ಬರೆದಿದೆ. ಹಿಂದೆ ಮೈಸೂರಿನ ಒಡೆಯರ ರಾಜ ಮನೆತನದ ರಾಜ ಜಯಚಾಮರಾಜೇಂದ್ರ ಒಡೆಯರು ಈ ದೇವಸ್ಥಾನಕ್ಕೆ ಬಂದು ತಮಗೆ ಮಕ್ಕಳಾಗುತ್ತ ಎಂದು ಕೊಳದ ಬಳಿ  ಕುಳಿತರೆ, ಕೊಳದಲ್ಲಿ ಬೆಳ್ಳಿಯ ತೊಟ್ಟಿಲು ದೊರಕಿತ್ತಂತೆ.ಈ ಘಟನೆಯ ಬಳಿಕವೇ ಶ್ರೀಕಂಠ ದತ್ತ ಒಡೆಯರ್ ಹುಟ್ಟಿದ್ದು ಎಂದು ಹೇಳಲಾಗುತ್ತದೆ.

ಇದರ ಪಕ್ಕದಲ್ಲಿರೋ ಇನ್ನೊಂದು ದೇವಸ್ಥಾನವೇ  ಹಾಲು ರಾಮೇಶ್ವರ. ಇದಕ್ಕೆ ಈ ಹೆಸರು ಹೇಗೆ ಬಂತು ಅಂತ ನೋಡಿದ್ರೆ ಇದಕ್ಕೂ ಸಹ ಒಂದು ಇತಿಹಾಸವಿದೆ. ಇದರ ಪ್ರಕಾರ ಶ್ರೀರಾಮ ವನವಾಸದ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಬಂದಿದ್ದನಂತೆ, ಅಲ್ಲಿನ ದಟ್ಟಕಾಡಿನಲ್ಲಿ ಒಂದು ದಿನಕ್ಕೆ ತಂಗುತ್ತಾನೆ. ಆಗ ತನ್ನ ಇಷ್ಟದೇವನ ಪೂಜೆಗೆ ಎಂದು ಒಂದು ಲಿಂಗವನ್ನು ಸ್ಥಾಪಿಸಿ ಫೂಜೆ ಸಲ್ಲಿಸಿ ಮರುದಿನ ಅಲ್ಲಿಂದ ತೆರಳುತ್ತಾನೆ. ದಟ್ಟ ಕಾಡದ ಕಾರಣ ಜನ ಸಂದಣಿ ಇಲ್ಲದೇ ಇರುವುದರಿಂದ ಸ್ಥಾಪಿಸಲಾದ ಲಿಂಗಕ್ಕೆ ಪೂಜೆ ನಡೆಯುತ್ತಿರುವುದಿಲ್ಲ. ಹೀಗಿರುವಾಗ ಪವಾಡ ಎಂಬಂತೆ ಒಂದು ಹಸು ಸ್ವಯಂಪ್ರರಣೆಯಿಂದ ಆ ಲಿಂಗಕ್ಕೆ ಹಾಲನ್ನು ಹರಿಸುತ್ತದೆ ಆದ ಕಾರಣ ಈ ಸ್ಥಳಕ್ಕೆ ಹಾಲು ರಾಮೇಶ್ವರ ಎಂದು ಹೆಸರು ಬಂದಿದೆ.

ಇದನ್ನೂ ಓದಿ:ICC T20 World Cup 2022 : ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ, ಆಶಿಶ್‌ ನೆಹ್ರಾ ಮಹತ್ವದ ಘೋಷಣೆ

ಇದನ್ನೂ ಓದಿ: Fitness Apps : ನೀವು ಫಿಟ್‌ನೆಸ್‌ ಆಪ್‌ಗಳನ್ನು ಹುಡುಕುತ್ತಿದ್ದೀರಾ? ಇಲ್ಲಿದೆ 5 ಬೆಸ್ಟ್‌ ಫಿಟ್‌ನೆಸ್‌ ಆಪ್‌ಗಳು!

Halu Rameshwara Temple: You Wouldn’t Miss to visit

Comments are closed.