ಬೆಳಿಗ್ಗೆ ಅಲಾರಾಂ ಜೋರಾಗಿ ಹೊಡೆದುಕೊಂಡ್ರೆ ಮಾತ್ರ ನಿಮಗೆ ಎಚ್ಚರವಾಗೋದಾ? ಹಾಗಿದ್ರೆ ಈ ಅಪಾಯಗಳು ನಿಮ್ಮನ್ನು ಕಾಡಬಹುದು ಎಚ್ಚರ!
Side Effects of Loud Alarm Clock: ಇತ್ತೀಚಿನ ದಿನಗಳಲ್ಲಿ ಅಲರಾಂ ಸೆಟ್ ಮಾಡಿಕೊಳ್ಳದಿದ್ದರೆ ಯಾವ ಕೆಲಸವೂ ಆಗುವುದೇ ಇಲ್ಲ ಎಂಬಂತಾಗಿದೆ.
ದಿನನಿತ್ಯದ ಸಾಮಾನ್ಯ ಕೆಲಸಗಳಿಂದ ಹಿಡಿದು ಮಹತ್ವದ ಮೀಟಿಂಗ್‌ವರೆಗೆ ಟೈಂ ಸೆಟ್ ಮಾಡುವ ಅಭ್ಯಾಸ ಬಹುತೇಕ ಎಲ್ಲರಿಗೂ ಆಗಿಬಿಟ್ಟಿದೆ. ಇದು ನಿದ್ದೆಗೂ ಹೊರತಾಗಿಲ್ಲ.
ಅಲರಾಂ ದೊಡ್ಡ ಶಬ್ದಮಾಡಿ ಹೊಡೆದುಕೊಳ್ಳದಿದ್ದರೆ ನಿದ್ದೆಯಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉದ್ಭವವಾಗಿದೆ. ಬೆಳಗ್ಗಿನ ಸಮಯಕ್ಕೆ ಸರಿಯಾಗಿ ಎದ್ದೇಳುವ ಬಹುತೇಕರ ಸಾಮಾನ್ಯ ವಿಧಾನ ಇದಾಗಿದೆ.
ಆದರೆ ಅಂತಹ ದೊಡ್ಡ ಶಬ್ದಕ್ಕೆ ಹಠಾತ್ತನೆ ಎಚ್ಚರಗೊಳ್ಳವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ಗೊತ್ತಾ?
ಹೌದು, ಅಲರಾಂನ ಜೋರಾದ ಶಬ್ದದಿಂದ ನೀವು ನಿದ್ದೆಯಿಂದೇನೋ ಎಚ್ಚರಗೊಳ್ಳಬಹುದು. ಆದರೆ ಅಂತಹ ಹಠಾತ್ ಕಂಪನವು ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸಿ, ನಿಮ್ಮ ಆರೋಗ್ಯ ಹದೆಗೆಡಿಸುತ್ತದೆ ಎಂಬುದು ಇತ್ತೀಚೆಗೆ ತಿಳಿದು ಬಂದ ವಿಷಯವಾಗಿದೆ.
ಹಾಗಾದರೆ ಅಲಾರಾಂನ ಜೋರಾದ ಶಬ್ದದಿಂದ ಆರೋಗ್ಯ ಹೇಗೆ ಹಾನಿಗೆ ಒಳಗಾಗುತ್ತದೆ ಇಲ್ಲಿದೆ ಓದಿ.
ಒತ್ತಡ ಹೆಚ್ಚಾಗುತ್ತದೆ
ನೀವು ಗಾಢ ನಿದ್ದೆಯಲ್ಲಿರುವಾಗ ಇದ್ದಕ್ಕಿದ್ದಂತೆ ಒಮ್ಮೆಲೆ ಜೋರಾದ ಶಬ್ದವನ್ನು ಕೇಳಿದಾದ ನಿಮ್ಮ ದೇಹವು ‘ಫೈಟ್ ಅಥವಾ ಫ್ಲೈಟ್’ ಅಂದರೆ ಹೋರಾಡುವ ಅಥವಾ ಓಡಿಹೋಗುವ ಮೋಡ್‌ಗೆ ಹೋಗುತ್ತದೆ. ಇದು ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಮಟ್ಟದಲ್ಲಿ ತಕ್ಷಣ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ಹೃದಯ ಬಡಿತ ಇದ್ದಕ್ಕಿದ್ದಂತೆ ವೇಗಗೊಳ್ಳುತ್ತದೆ, ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ದೇಹದಾದ್ಯಂತ ರಕ್ತದ ಹರಿವಿನಲ್ಲಿ ಬದಲಾವಣೆಯಾಗುತ್ತದೆ. ಇದು ಪದೇ ಪದೇ ಸಂಭವಿಸಿದಲ್ಲಿ, ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಚಯಾಪಚಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಜೋರಾದ ಅಲಾರಾಂ ಶಬ್ದಕ್ಕೆ ಎಚ್ಚರಗೊಳ್ಳುವುದು ದಿನವಿಡೀ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ರೀತಿ ಎಚ್ಚರಗೊಳ್ಳುವ ಜನರು ಹೆಚ್ಚಾಗಿ ದಿನವನ್ನು ಕಿರಿಕಿರಿಯೊಂದಿಗೆ ಪ್ರಾರಂಭಿಸುತ್ತಾರೆ. ಅದು ಅವರ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಕೆಲಸದ ಗುಣಮಟ್ಟದಲ್ಲಿ ಕೊರತೆ ಕಾಣಿಸುತ್ತದೆ. ದೀರ್ಘಾವಧಿಯಲ್ಲಿ, ಇದು ಆತಂಕ ಮತ್ತು ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಎಲ್ಲರಿಗಾಗಿ ಅಲ್ಲ ಪಾಲಕ್: ಪಾಲಕ್ ಸೊಪ್ಪು ತಿನ್ನೋ ಮೊದಲು ಈ ವಿಚಾರ ತಿಳ್ಕೊಳ್ಳಿ
ಸ್ಲೀಪ್ ಸೈಕಲ್ ಮೇಲೆ ಪರಿಣಾಮ
ನಮ್ಮ ಸ್ಲೀಪ್ ಸೈಕಲ್ (ನಿದ್ರೆಯ ಚಕ್ರಗಳು) 90 ನಿಮಿಷಗಳ ಚಕ್ರಗಳಲ್ಲಿ ಸಂಭವಿಸುತ್ತವೆ. ಇವುಗಳಲ್ಲಿ ಲಘು ನಿದ್ರೆ, ಆಳವಾದ ನಿದ್ರೆ ಮತ್ತು REM ಚಕ್ರಗಳು ಸೇರಿವೆ. ಆಳವಾದ ನಿದ್ರೆ ಅಥವಾ REM ಚಕ್ರಗಳ ಸಮಯದಲ್ಲಿ ಹಠಾತ್ತನೆ ಎಚ್ಚರಗೊಳ್ಳುವುದು ನಿದ್ರೆಗೆ ಅಡ್ಡಿಪಡಿಸುತ್ತದೆ. ಇದು ಆಯಾಸ, ಅರೆನಿದ್ರಾವಸ್ಥೆ ಮತ್ತು ದಿನವಿಡೀ ಶಕ್ತಿಯ ಕೊರತೆಗೆ ಕಾರಣವಾಗಬಹುದು.
ಪರಿಹಾರ ಏನು?
- ಬೆಳಿಗ್ಗೆ ಎಚ್ಚರಗೊಳ್ಳಲು ಜೋರಾದ ಶಬ್ದದ ಅಲಾರಾಂ ಬಳಸಬೇಡಿ. ಬದಲಾಗಿ ಸೌಮ್ಯ ಶಬ್ದ ಹೊಮ್ಮುವ ಅಲಾರಾಂ ಬಳಸಿ. ಇದು ದೇಹವು ಹಠಾತ್ ಕಂಪಿಸುವುದನ್ನು ತಡೆಯುತ್ತದೆ.
- ಪ್ರತಿದಿನ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ, ಇದರಿಂದ ಬೆಳಿಗ್ಗೆ ನೀವು ತಾಜಾತನದಿಂದ ಇರುತ್ತೀರಿ.
- ನಿಮ್ಮ ನಿದ್ರೆ ಮತ್ತು ಎಚ್ಚರಗೊಳ್ಳುವ ಸಮಯಕ್ಕೆ ನಿಗದಿತ ಸಮಯವನ್ನು ನಿಗದಿಪಡಿಸಿ. ಇದು ನಿಮ್ಮ ದೈಹಿಕ ಗಡಿಯಾರವನ್ನು ಹೊಂದಿಸುತ್ತದೆ ಮತ್ತು ಪ್ರತಿದಿನ ಆ ಸಮಯದಲ್ಲಿ ಸ್ವಯಂಚಾಲಿತವಾಗಿ ಎಚ್ಚರಗೊಳ್ಳುತ್ತದೆ.



