Natta Raameshwaram : ನತ್ತಾ ರಾಮೇಶ್ವರಂ : 11 ತಿಂಗಳು ನೀರಿನಲ್ಲಿಯೇ ಮುಳುಗಿರುತ್ತೆ ಶಿವಲಿಂಗ

  • ಹೇಮಂತ್ ಚಿನ್ನು

ರಾಮೇಶ್ವರಂ ನಮಗೆ ಗೊತ್ತು. ಇದಾವುದು ನತ್ತಾ ರಾಮೇಶ್ವರಂ (Natta Raameshwaram) ಅಂದು ಕೊಂಡಿರಾ ? ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ನದಿಯ ಗೋಸ್ತಾನಿ ನದಿ ತೀರದಲ್ಲಿ ಇದೆ ಈ ನತ್ತಾ ರಾಮೇಶ್ವರಂ. ಇಲ್ಲಿ ಒಟ್ಟು ಮೂರು ಶಿವಲಿಂಗಗಳಿದ್ದು ಒಂದೊಂದು ಶಿವಲಿಂಗದ ಕಥೆಯೂ ವಿಭಿನ್ನ.

ರಾಮನು ರಾವಣಾಸುರನ ಸಂಹಾರದ ನಂತರ ಹತ್ಯಾಪಾಪವನ್ನು ಪರಿಹರಿಸಿಕೊಳ್ಳಲು ಅಲ್ಲಲ್ಲಿ ಶಿವಲಿಂಗಗಳನ್ನು ಪ್ರತಿಷ್ಠೆ ಮಾಡುತ್ತಾ ಈ ಗೋಸ್ತಾನಿ ನದೀ ತೀರಕ್ಕೆ ಬಂದು ಈ ನದಿಯ ಮಹತ್ವ ತಿಳಿದು, ಮಧ್ಯಾಹ್ನ ಬೇರೆ ನದಿಗಳು ಈ ನದಿಯಲ್ಲಿ ಸಂಗಮ ವಾಗುವ ವೇಳೆಗೆ ಇಲ್ಲಿ ಶಿವಲಿಂಗ ಪ್ರತಿಷ್ಠೆ ಮಾಡಲು ಸಂಕಲ್ಪ ಮಾಡುತ್ತಾನೆ. ಆಂಜನೇಯನನ್ನು ಶಿವಲಿಂಗವನ್ನು ತರಲು ಕಾಶಿಗೆ ಕಳುಹಿಸುತ್ತಾನೆ.

ಆಂಜನೇಯನು ಮುಹೂರ್ತದ ಸಮಯಕ್ಕೆ ಬರಲು ಸಾಧ್ಯವಾಗುವುದಿಲ್ಲ. ಆಗ ಮುಹೂರ್ತ ಕಾಲ  ಮೀರಬಾರದೆಂಬ ಕಾರಣಕ್ಕೆ ರಾಮ-ಸೀತೆ ಇಬ್ಬರೂ ಸೇರಿ ಗೋಸ್ತಾನಿ ನದಿಯ ಮಣ್ಣಿನಲ್ಲೇ ಶಿವಲಿಂಗ ಮಾಡುತ್ತಾರೆ. ಮಣ್ಣನ್ನು ಶುದ್ಧ ಮಾಡಲೂ ಸಮಯ ಇರುವುದಿಲ್ಲ. ಗೋಸ್ತಾನಿ ನದಿಯಲ್ಲಿ ಬಹಳಷ್ಟು ಶಂಖಹುಳುಗಳು ಇರುತ್ತವೆ. ಮಣ್ಣಿನ ಜೊತೆ ಶಂಖಹುಳುಗಳ ಚಿಪ್ಪುಗಳನ್ನೂ ಸೇರಿಸಿ ಶಿವಲಿಂಗವ ನ್ನು ಆಯತಾಕಾರವಾಗಿ ಮಾಡಿ ಪ್ರತಿಷ್ಠೆ ಮಾಡುತ್ತಾರೆ.

ತೆಲುಗಿನಲ್ಲಿ ನತ್ತ ಅಂದರೆ ಶಂಖಹುಳುಗಳು. ಮಣ್ಣಿನ ಜೊತೆ ಶಂಖಹುಳುಗಳ ಚಿಪ್ಪುಗಳೂ ಸೇರಿದ ಶಿವಲಿಂಗವಾದುದರಿಂದ ಇದನ್ನು ನತ್ತಾ ರಾಮೇಶ್ವರಂ ಅನ್ನುತ್ತಾರೆ. ಇಂದಿಗೂ ನಾವು ಶಿವಲಿಂಗದ ಮೇಲೆ ಶಂಖಹುಳುಗಳ ಚಿಪ್ಪುಗಳನ್ನು ಕಾಣಬಹುದು ಹಾಗೂ ಅದನ್ನು ಮಾಡುವಾಗ ರಾಮ ಸೀತೆಯರು ಉಳಿಸಿದ ಮಣ್ಣಿನ ಉಂಡೆಯನ್ನೂ ನೋಡಬಹುದು. 

ಇದಲ್ಲದೆ ಇಲ್ಲಿ ಪರಶುರಾಮನು ಕ್ಷತ್ರಿಯನ್ನು ಸಂಹರಿಸಿದ ಪಾಪ ಕಳೆದುಕೊಳ್ಳಲು ಇಲ್ಲಿ ಶಿವಲಿಂಗ ಪ್ರತಿಷ್ಠೆ ಮಾಡುತ್ತಾನೆ. ಸಮಾರಂಭಕ್ಕೆ ದೇವಾನುದೇವತೆಗಳು ಬಂದಿದ್ದರೆಂಬ ಪ್ರತೀತಿ ಇದೆ. ಹಾಗಾಗಿ ಈ ಶಿವಲಿಂಗವನ್ನು ಸಪ್ತಕೋಟೀಶ್ವರ ಎಂದೂ ಕರೆಯುತ್ತಾರೆ. ಇಲ್ಲಿನ ಶಿವಲಿಂಗವು ಪಶ್ಚಿಮಭಿಮುಖವಾಗಿರುವುದೂ ಒಂದು ವಿಶೇಷ.  ಶಿವಲಿಂಗದ ಪ್ರತಿಷ್ಠೆ ಆದ ತಕ್ಷಣ ಪರಶುರಾಮನಿಗೆ ತನ್ನೆಲ್ಲಾ ಕೋಪ ಶಿವಲಿಂಗಕ್ಕೆ ವರ್ಗಾವಣೆಯಾಗಿ ಅದು ಅಗ್ನಿಲಿಂಗವಾಗಿರು ವುದು ಅರ್ಥವಾಗುತ್ತದೆ. ತಕ್ಷಣ ಪರಶುರಾಮನು ಆ ಶಿವಲಿಂಗಕ್ಕೆ ಸುತ್ತಲೂ ಕೆರೆಕಟ್ಟಿ ಸುತ್ತಲೂ ನೀರು ತುಂಬಿಸಿ ಶಿವನನ್ನು ಶಾಂತವಾಗಿ ಇರಿಸುತ್ತಾನೆ.

ಆದರೆ ಶಿವನಿಗೆ ಪೂಜೆ ನಡೆಯುವುದಿಲ್ಲವೇ ಎಂದು ಚಿಂತೆಯಾಗುತ್ತದೆ. ಅಗ ಶಿವನು ಪ್ರತ್ಯಕ್ಷವಾಗಿ ತಾನು 11ತಿಂಗಳು ನೀರಿನಲ್ಲಿ ಯೇ ಇರುತ್ತೇನೆ ನನಗೆ ಪ್ರಿಯವಾದ ವೈಶಾಖ ಮಾಸದಲ್ಲಿ ನೀರನ್ನು ಖಾಲಿಮಾಡಿ ಪೂಜೆಗಳನ್ನು ನಡೆಸಿರಿ, ಹಾಗೂ ಹಣ್ಣಿನ ರಸಗಳಿಂದ ಅಭಿಷೇಕ ಮಾಡಿರಿ ಎಂದು ಅಭಯ ನೀಡುತ್ತಾನೆ. ಅದರಂತೆ ಈಗಲೂ ವರುಷದ 11 ತಿಂಗಳೂ ನೀರಿನಲ್ಲಿಯೇ ಇರುವ ಶಿವಲಿಂಗಕ್ಕೆ ವೈಶಾಖ ಮಾಸದಲ್ಲಿ ಮಾತ್ರ ಪೂಜೆ ಅಭಿಷೇಕ ನಡೆಯುತ್ತದೆ. ಆಗ ಜನರು ತಂಡೋಪತಂಡಗಳಾಗಿ ಬಂದು ಈ ಶಿವಲಿಂಗದ ದರ್ಶನ ಮಾಡುತ್ತಾರೆ.

ಹನುಮನು ಮುಹೂರ್ತದ ಸಮಯಕ್ಕೆ ಕಾಶಿಯಿಂದ  ಬರಲು ಸಾಧ್ಯವಾಗದೇ ತಡವಾಗಿ ತಂದ ಶಿವಲಿಂಗ ವನ್ನು ಲಕ್ಷ್ಮಣನು ಗೋಸ್ತಾನಿ ನದೀ ತೀರದಲ್ಲಿ ಪ್ರತಿಷ್ಟಿಸುತ್ತಾನೆ. ಹಾಗಾಗಿ ಈ ಸ್ಥಳ ತ್ರಿಲಿಂಗ ಕ್ಷೇತ್ರವಾಗಿದೆ. ಇಲ್ಲಿನ ಗೋಸ್ತಾನಿ ನದಿಗೂ ಆ ಹೆಸರು ಬರಲು ಹಾಗೂ ಉಗಮಕ್ಕೂ ಒಂದು ಕಥೆಯಿದೆ. ಬಹಳ ಹಿಂದೆ ಪೃಥು ಅನ್ನುವ  ರಾಜ ತನ್ನ ರಾಜ್ಯದಲ್ಲಿ ಕ್ಷಾಮ ಬರಲು ಭೂತಾಯಿ ಯನ್ನು ಪ್ರಾರ್ಥಿಸಲು ಆ ತಾಯಿಯು ಧೇನುಕಾದ್ರಿಯ ಬಳಿ ಗೋ ರೂಪಿಣಿಯಾಗಿ ಬಂದು 33 ಕೋಟಿ ದೇವರುಗಳನ್ನು ಕರೆದು ತನ್ನ ಹಾಲನ್ನು ಹಿಂಡಲು ಹೇಳುತ್ತಾಳಂತೆ. ಆ ಹಾಲೇ ಗೋಸ್ತಾನಿ ನದಿಯಾಗಿ ಹರಿಯಿತಂತೆ. ಗೋವಿನ ಸ್ತನದಿಂದ ಉದಿಸಿದ್ದಕ್ಕೆ ಇದಕ್ಕೆ ಗೋಸ್ತಾನಿ ಅಂತ ಹೆಸರು ಬಂತು. ಈ ಸಲ ಗೋದಾವರಿ ಕಡೆ ಹೊರಟರೆ ಇಷ್ಟೆಲ್ಲಾ ವಿಶೇಷತೆ ಗಳಿರುವ ನತ್ತಾ ರಾಮೇಶ್ವರಂ ನೋಡಿಕೊಂಡು ಬನ್ನಿ.

ಇದನ್ನೂ ಓದಿ : ಪಾಪವಿನಾಶಿ ತೀರ್ಥ : ಭಕ್ತರ ಪಾಲಿಸುವ ಶ್ರೀಕ್ಷೇತ್ರ : ಭಕ್ತರ ಪಾಲಿಗೆ ಕಾಮಧೇನು ವರದಹಳ್ಳಿ ಶ್ರೀಧರಾಶ್ರಮ

ಇದನ್ನೂ ಓದಿ : Polali Rajarajeshwari : ಇಲ್ಲಿ ಬಂದ್ರೆ ಕಾಣೆಯಾದ ವಸ್ತುವೂ ಸಿಗುತ್ತೆ : ಭಕ್ತರನ್ನು ಕಾಪಾಡುತ್ತಾಳೆ ಪೊಳಲಿಯ ಜಗನ್ಮಾತೆ

(Natta Raameshwaram Shivalinga drowning water-11 months )

Comments are closed.