ಸಾರ್ ...ಇವರ ಹೆಸರು ಗೋಪಾಲ್ ಕುಲಕರ್ಣಿ ಅಂತ.. ಅಜ್ಜರ ನಮಸ್ಕಾರ ಅಂದಿದ್ದೆ. ಸೂರ್ಯಕಾಂತ ಶಿರೂರ ನನ್ನನ್ನು ಪರಿಚಯಿಸಿದ್ದ… ಬೆಂಗಳೂರಿನಿಂದ ಬಂದಿದ್ದಾರೆ ಅಂದಿದ್ದ. ಮಾಟ ಮಂತ್ರದ ಬಗ್ಗೆ ಪುಸ್ತಕ ಬರೀತಾ ಇದ್ದಾರೆ ಅಂತಲೂ ಹೇಳಿದ್ದ… ನಾನು ಬಾನಾಮತಿ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು ಅಂತ ಅಂದೆ.. ಕುಲಕರ್ಣಿ ತಾತ ನನ್ನನ್ನ ಮನೆಯೊಳಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡು ಬಾನಾಮತಿ ಇತಿಹಾಸವನ್ನು ಹೇಳೋಕೆ ಶುರು ಮಾಡಿದ್ರು…

ಉತ್ತರ ಕರ್ನಾಟಕದ ಜನರ ಪಾಲಿಗೆ ಭಾನುಮತಿ ಅಂದ್ರೆ ಭಯ ಭೀತಿ ಉಂಟು ಮಾಡುವ ಘೋರಾ ವಿದ್ಯೆ…ಈ ಬಾನಾಮತಿಗೆ ಇನ್ನೂರು ವರ್ಷಗಳ ಇತಿಹಾಸ ಇದೆಯಂತೆ…ಈ ವಿದ್ಯೆ ಕೇವಲ ನಮ್ಮಲ್ಲಿ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕದ ತುಂಬಾ ತುಂಬಿ ಹೋಗಿದೆ ಅಂದಿದ್ರು ಗೋಪಾಲ ಕುಲಕರ್ಣಿ… ಅವರು ಹೇಳುತ್ತಿದ್ದ ಒಂದೊಂದು ಅಂಶವನ್ನು ನಾನು ವಿಡಿಯೋ ಚಿತ್ರೀಕರಿಸಿಕೊಂಡು ಬರೆದುಕೊಳ್ಳುತ್ತಾ ಹೋದೆ…

ಕೇವಲ ಧಾರವಾಡ ಮಾತ್ರವಲ್ಲ ಗುಲ್ಬರ್ಗ, ರಾಯಚೂರು, ಬೀದರ್ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಾಗದಲ್ಲಿ ಬಾನಾಮತಿ ವಿದ್ಯೆ ಬಗ್ಗೆ ಹೇಳ್ತಾರೆ… ಈ ಕ್ಷುದ್ರ ವಿದ್ಯೆ ಯಿಂದಾಗಿ ಅನೇಕರು ನಿಗೂಢವಾಗಿ ಸಾವನ್ನಪ್ಪಿದ್ದಾರಂತೆ… ಇದರಿಂದ ಸಾಕಷ್ಟು ಮಂದಿ ಪೀಡನೆಗೆ ಒಳಗಾಗಿದ್ದಾರೆ ಅಂತ ಅದೊಮ್ಮೆ ವಿಧಾನ ಪರಿಷತ್ತಿನಲ್ಲೂ ಧ್ವನಿ ಮೊಳಗಿತ್ತು… ನುರಿತ ಒಂದು ವೈದ್ಯರ ತಂಡವೇ ಇಲ್ಲಿಗೆ ಭೇಟಿ ಕೊಟ್ಟು ಭಾನಾಮತಿ ಅನ್ನೋದು ಮೂಢ ಜನರ ನಂಬಿಕೆ ಭ್ರಮೆ ಅಂತ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು ಅಷ್ಟೇ…ಈ ಭಾನಾಮತಿ ಬಗ್ಗೆ ಕೇಳಿದ್ರೆ ಸಾಕು ಅಲ್ಲಿನ ಜನ ಬೆದರಿ ಬಿಡ್ತಾರೆ… ಅಂಥದ್ರಲ್ಲಿ ಗೋಪಾಲ ಕುಲಕರ್ಣಿ ಅವರು ನಮಗೆ ಸಿಕ್ಕಿದ್ದು ನನ್ನ ಅದೃಷ್ಟವೇ ಇರಬೇಕು … ಅವರು ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು…
ಅಸಲಿಗೆ ಭಾನಾಮತಿ ಅನ್ನೋ ವಿದ್ಯೆಯನ್ನು ಇಲ್ಲಿನ ಮಾಂತ್ರಿಕರು ಹೊಟ್ಟೆ ಪಾಡಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅನೇಕ ಬುರುಡೆ ಬಾಬಾಗಳು ಇದೇ ಭಾನಾಮತಿ ಮತ್ತು ಕೇನಾಮತಿ ಅನ್ನೋ ವಿದ್ಯೆಗಳನ್ನು ಬಳಸಿಕೊಂಡು ಹೊಟ್ಟೆ ಹೊರೆಯುತ್ತಿದ್ದಾರೆ… ವಿಜ್ಞಾನ ಇಷ್ಟೆಲ್ಲಾ ಮುಂದುವರಿದಿದ್ದರೂ ಖಡಕ್ ರೊಟ್ಟಿ ಕೆಂಪು ಮೆಣಸಿನ ಕಾಯಿ ಖಾರ ಉಳ್ಳಾಗಡ್ಡೆ ತಿನ್ನುವ ಇಲ್ಲಿನ ಜನರಿಗೆ ಮೂಢತನ ಎನ್ನುವುದು ಒಂದು ಅಂಟು ರೋಗವಾಗಿ ಬಿಟ್ಟಿದೆ…

ಈ ಭಾನಾಮತಿಯನ್ನು ಉತ್ತರ ಕರ್ನಾಟಕದ ಜನ ಅದೆಷ್ಟರ ಮಟ್ಟಿಗೆ ನಂಬ್ತಾರೆ ಅನ್ನೋದಿಕ್ಕೆ ಕುಲಕರ್ಣಿ ಅಜ್ಜ ಒಂದು ಉದಾಹರಣೆಯನ್ನು ಕೊಟ್ಟು ಸಂದರ್ಭ ಸಹಿತ ವಿವರಿಸಿದರು. ಆಕೆಯ ಹೆಸರು ಶಾರವ್ವ. ಗಂಡ ಭೀಮರಾಯ. ಇದೊಂದು ತುಂಬು ಕುಟುಂಬ. ಮನೆಯೊಳಗೆ ಮಕ್ಕಳ ಕಲರವ… ಬೆಳಗಿನ ಜಾವ ಶಾರವ್ವ ಐದು ಮೂವತ್ತಕ್ಕೆ ಎದ್ದು ಮನೆಯಿಂದ ಹೊರ ಬಂದು ಕೊಟ್ಟಿಗೆ ಕಡೆ ಕಸ ಗುಡಿಸೋಕೆ ಪೊರಕೆ ಇಡ್ಕೊಂಡು ಹೋಗಿದ್ದಳಂತೆ.. ಅವಳ ಪ್ರೀತಿಯ ಹಸು ಗಂಗೆ ಉಸಿರು ಚೆಲ್ಲಿಕೊಂಡು ಮಲಗಿತ್ತಂತೆ… ಅದರ ಹೊಟ್ಟೆ ಊದಿ ಕೊಂಡಿತ್ತಂತೆ… ಅದರ ಮೈಮೇಲೆ ಕೆಂಪು ಬರೆಗಳು ಮೂಡಿದ್ದವಂತೆ… ಅಲ್ಲಲ್ಲಿ ರಕ್ತದ ಕಾಯಿಲೆಗಳು ಬಿದ್ದಿತ್ತಂತೆ…

ಹಸುಗೆ ಅದೇನು ಕಾಯಿಲೆ ಬಂದಿತ್ತೋ ಇಲ್ಲವೋ ಗೊತ್ತಿಲ್ಲ… ಅದು ತೀರಿ ಹೋಗಿತ್ತು… ಇದಕ್ಕೆ ಶಾರವ್ವ ಇಟ್ಟ ಹೆಸರು ಭಾನುಮತಿ… ಅದಕ್ಕೆ ತಕ್ಕಂತೆ ಅಕ್ಕಪಕ್ಕದವರು ಕೂಡ ಯಾರೋ ಮಾಟ ಮಾಡಿಸಿದ್ದಾರೆ ಅಂತ ಗುಸುಗುಸು ಶುರು ಮಾಡಿದ್ದರಂತೆ… ಅಷ್ಟೇ ಆ ಮನೆಯವರ ಎದೆಯಲ್ಲಿ ಢವಢವ ಮನೆಗೆ ಭಾನುಮತಿ ದೃಷ್ಟಿ ಬಿದ್ದಿದೆ ಮಕ್ಕಳಿರುವ ಮನೆ ಅಂತ ಯೋಚಿಸಿ ಯೋಚಿಸಿಯೇ ಊರು ಬಿಟ್ಟರಂತೆ… ಅವರು ಇವತ್ತಿಗೂ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ ಅಂದಿದ್ದ ಗೋಪಾಲ ಕುಲಕರ್ಣಿ ಅಜ್ಜ… ಇದೊಂದು ಉದಾಹರಣೆ ಅಷ್ಟೇ… ಕಾಯಿಲೆ ಬಂದ್ರೆ, ಏನೇ ಎಡವಟ್ಟಾದರೂ ಅದಕ್ಕೆ ಭಾನುಮತಿ ಅನ್ನೋ ಪಟ್ಟ ಕಟ್ಟುತ್ತಿದ್ದರು ಇಲ್ಲಿನ ಜನ.. ಭಯದ ನೆರಳಲ್ಲಿ ತುಡಿಯುತ್ತಿರುವ ಈ ಭಾಗದ ಜನರ ಅಳಲನ್ನು ಕಣ್ಣಾರೆ ನೋಡಿದವನು ನಾನು… ಈ ಎಲ್ಲವುಗಳನ್ನು ಮುಂದಿನ ಸಂಚಿಕೆಯಲ್ಲಿ ವಿವರಿಸ್ತೀನಿ…
(ಮುಂದುವರಿಯುತ್ತದೆ…)
- ಕೆ.ಆರ್.ಬಾಬು
