ಬಾಬಾನ ಬಳಿ ಮಾಹಿತಿ ಕಲೆ ಹಾಕಿದ ಬೆನ್ನಲ್ಲೇ ನಾನು ಅನೇಕ ಭಾನಾಮತಿಗೊಳಗಾದ ಜನರನ್ನ ಸಂದರ್ಶಿಸಿದ್ದೇನೆ… ಅವರನ್ನು ನಾನು ಮಾತಾಡಿಸಿದಾಗ ನನಗೆ ಸಿಕ್ಕ ಉತ್ತರವೆಲ್ಲವೂ ಭಾನಾಮತಿ ಪರ ಇದ್ದಂತವೇ… ಎಲ್ಲೋ ಕೆಲ ತಿಳುವಳಿಕೆಯುಳ್ಳವರು ಮಾತ್ರ ಅಯ್ಯೋ ಇದೆಲ್ಲಾ ಬೂಟಾಟಿಕೆ ಸಾರ್ ಅಂದಿದ್ರು… ನಿಜಕ್ಕೂ ಭಾನಮತಿಗೆ ಒಳಗಾದ ಅನೇಕರನ್ನ ಕರೆದು ಮಾತಾಡಿಸಿದ್ದೆ.. ಅವರೆಲ್ಲ ತಮಗಾದ ಅನುಭವಗಳನ್ನ ಹೇಳಿಕೊಂಡಿದ್ರು…ಮತ್ತೊಂದಿಷ್ಟು ಮಂದಿ ಚೆಂದದ ಕಥೆಯನ್ನೂ ಕಟ್ಟಿದ್ರು…

ನಾನಷ್ಟೆ ಅಲ್ಲ, ನನ್ನಂತೆ ಸರ್ಕಾರದಿಂದ ನಿಯೋಜನೆಗೊಂಡ ಅನೇಕ ವೈದ್ಯರ ತಂಡಗಳು, ತಜ್ಞರ ತಂಡಗಳು ಕೂಡ ಈ ಭಾಗದಲ್ಲಿ ಅಲೆದು ಅಲೆದು ಸುಸ್ತಾಗಿವೆ..ಎಲ್ಲಾ ಸುಳ್ಳು ಅನ್ನೋರ ಸಂಖ್ಯೆ ತುಂಬಾ ಕಡಿಮೆ..ಅಂದಾಗೆ ಭಾನಾಮತಿಯಿಂದಲೇ ಆಗಾಯ್ತು ಈಗಾಯ್ತು ಅಂದವರನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದೇನೆ.. ಎಲ್ಲವೂ ಸಾಮಾನ್ಯ ಖಾಯಿಲೆಗಳೇ.. ಸರಿಯಾದ ವೈದ್ಯರಿಗೆ ತೋರಿಸಿದ್ರೆ ಗುಣವಾಗುವಂತಹ ರೋಗಗಳೇ.

ಆದ್ರೆ ವೈದ್ಯರಿಗೆ ತೋರಿಸದೆ ಜ್ವರದಲ್ಲಿ ನರಳುವವನಿಗೆ ದೇವರ ಹೆಸ್ರಲ್ಲಿ ತಣ್ಣೀರು ಸ್ನಾನ ಮಾಡ್ಸಿ ಬೆಟ್ಟ ಗುಡ್ಡ ಅಲೆಸಿದ್ರೆ ಏನಾಗುತ್ತೆ ಹೇಳಿ..ಖಾಯಿಲೆ ಮತ್ತಷ್ಟು ಉಲ್ಭಣವಾಗುತ್ತೆ… ಅದನ್ನೇ ಈ ಜನ ಭಾನಾಮತಿ ಕಾಟ ತುಂಬಾ ಜಾಸ್ತಿಯಾಗಿದೆ ಅಂತಿದ್ರು ಅಷ್ಟೆ… ನಿಮಗೆ ಇಲ್ಲಿನ ವೈದ್ಯರ ಬಗ್ಗೆಯೂ ಹೇಳಲೇಬೇಕು… ಖುದ್ದು ಈ ಭಾಗದ ವೈದ್ಯರೇ ಇದು ಭಾನಾಮತಿ ಇರಬಹುದು ಅಂತಾರೆ ಅಂದ್ರೆ ಲೆಕ್ಕ ಹಾಕಿ…ಓದಿಕೊಂಡ, ವೈದ್ಯಶಾಸ್ತ್ರವನ್ನ ಅರೆದುಕುಡಿದವರೇ ಈ ರೀತಿ ಹೇಳಿದ್ರೆ, ಅನಕ್ಷರಸ್ಥ ಏನು ತಾನೇ ಮಾಡಿಯಾನು..?

ಪ್ರಾಚೀನ ಕಾಲದಿಂದಲೂ ರೋಗ ರುಜಿನ ಅಮರಿಕೊಂಡ್ರೆ ಅವುಗಳನ್ನ ದೆವ್ವ ಪಿಶಾಚಿ ಅಂತಲೋ ದೇವರ ಶಾಪ ಅಂತಲೋ ಅಂದುಕೊಂಡೇ ಬಂದಿರುವ ಜನರಲ್ಲಿ ಪ್ರಕೃತಿಯ ಏರುಪೇರಾಗಿ ಖಾಯಿಲೆ ಕಾಣಿಸಿಕೊಂಡ್ರೆ ಅದು ದೆವ್ವ ದೇವರ ಆಟ ಅಂತಲೇ ನಂಬಿಬಿಡ್ತಾರೆ… ನಿಮಗೆ ಗೊತ್ತಿರಲಿಕ್ಕಿಲ್ಲ, ಪ್ರಾಚೀನ ಕಾಲದಲ್ಲಿ ಐರೋಪ್ಯ ದೇಶಗಳಲ್ಲಿ ವ್ಯಕ್ತಿ ಖಾಯಿಲೆಯಿಂದ ನರಳಿ ವಿಚಿತ್ರವಾಗಿ ಆಡುತ್ತಿದ್ರೆ ಅಂತವರನ್ನ ದೆವ್ವ ಮೆಟ್ಟಿಕೊಂಡಿದೆ ಅಂತ ಜೀವಂತವಾಗಿ ಸುಟ್ಟು ಬಿಡುತ್ತಿದ್ದರಂತೆ..

ಇಂತಹ ಮೂಢನಂಬಿಕೆಗಳೇ ಇವತ್ತಿಗೂ ಮುಂದುವರೆದುಕೊಂಡು ಬಂದಿವೆ.. ಈ ಭಾಗದಲ್ಲಿ ಜ್ವರ ಬರ್ಲಿ ತಲೆ ನೋವು ಕಾಣಿಸಿಕೊಳ್ಳಲಿ, ಮೊದಲು ಅವರು ಭಾವಿಸೋದೆ ಯಾರೋ ಮಾಟ ಮಾಡಿಸಿದ್ದಾರೆ ಅಂತ…ಇಲ್ಲವೇ ಮನೆ ದೇವರಿಗೆ ಎಲ್ಲೋ ಅಪಚಾರ ಮಾಡಿರಬೇಕು ಅಂತ…ಇಂತಹ ಮೂಢರಿಂದಲೇ ಸೃಷ್ಟಿಯಾಗಿರೋದು ಭಾನಮತಿ, ಮಾಟ ಮಂತ್ರ ಮೋಡಿಯಷ್ಟೆ… ಅಂದಾಗೆ ಈ ಭಾನಾಮತಿಯನ್ನ ಹೇಗೆ ತೆಗೀತ್ತಾರೆ..? ಅಮವಾಸ್ಯೆಯನ್ನೇ ಮಾಂತ್ರಿಕರು ಆಯ್ಕೆ ಮಾಡಿಕೊಳ್ಳೊದು ಯಾಕೆ..? ಇತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿಗಳನ್ನ ಮುಂದಿನ ಸಂಚಿಕೆಯಲ್ಲಿ ಕೊಡ್ತೀನಿ…
(ಮುಂದುವರಿಯುತ್ತದೆ…)
- ಕೆ.ಆರ್.ಬಾಬು
