ಕೆ.ಆರ್.ಬಾಬು (ಹಿರಿಯ ಪತ್ರಕರ್ತರು)
ಇಲ್ಲಿ ಎಲ್ಲವೂ ನಿಗೂಢ..! ಇದು ಮಾಂತ್ರಿಕರ ಬೀಡು..! ಇದೊಂದು ಮಾಯನಗರಿ..! ಯಕ್ಷಿಣಿ ವಿದ್ಯೆಗಳ ನೆಲ..! ಅದುವೇ ಕೊಳ್ಳೆಗಾಲ..!! ಕೊಳ್ಳೆಗಾಲದ ಜನ ಅಂದ್ರೆ ಇವತ್ತಿಗೂ ಅದೇನೋ ಒಂದು ರೀತಿಯ ಭಯ. ಅಸಲಿಗೆ ಕೊಳ್ಳೇಗಾಲದ ಜನ ಮಹಾ ಮಾಂತ್ರಿಕರಾ? ಈ ಊರಿಗೂ ಮಾಟ ಮಂತ್ರಕ್ಕೂ ಇರುವ ನಂಟಾದ್ರೂ ಎಂತದ್ದು ? ಮಾಟ ಮಡಗಿದರೆ, ಮೋಡಿ ಹಾಕಿದರೆ, ಮಂತ್ರ ಪಠಿಸಿದರೆ ಅದು ನಿಜಕ್ಕೂ ಪರಿಣಾಮ ಬೀರುತ್ತಾ ? ಸ್ಮಶಾನದೊಳಗೆ ನಟ್ಟ ನಡುರಾತ್ರಿ ಹೋಗಿ ಬೆತ್ತಲೆ ಕೂತು ಮಾಡುವ ಪೂಜೆ ನಿಜಕ್ಕೂ ಅಷ್ಟೊಂದು ಪವರ್ ಫುಲ್ಲಾ? ಇಂತಹದ್ದೊಂದು ಪ್ರಶ್ನೆಯನ್ನ ತಲೆಯಲ್ಲಿಟ್ಟುಕೊಂಡೇ ಕೊಳ್ಳೇಗಾಲಕ್ಕೆ ಹೊರಟವನು ನಾನು…

ಸುಮಾರು 23 ದಿನಗಳ ಕಾಲ ಕೊಳ್ಳೆಗಾಲದ ಜನರ ನಡುವೆ ಬೆರೆತ್ತಿದ್ದೇನೆ. ಮಾಂತ್ರಿಕರ ಮನೆಯೊಳಗೆ ಕುಳಿತು ಮಾತಾಡಿದ್ದೇನೆ. ಮಾಟ ಮಂತ್ರ ಮೋಡಿ ವಿದ್ಯೆಯನ್ನ ಕಣ್ಣಾರೆ ಕಂಡಿದ್ದೇನೆ.. ಅದೆಲ್ಲವೂ ಸತ್ಯವಾ..? ಕಣ್ಣು ಕಟ್ಟು ವಿದ್ಯೆಯಾ..? ಈ ಪ್ರಶ್ನೆಗಳ ಸುತ್ತಲೇ ಎಣೆದುಕೊಂಡಿದೆ ಈ ಲೇಖನ ಮಾಲಿಕೆ. ಸುಧೀರ್ಘವಾಗಿ ಕಂತುಗಳ ಲೆಕ್ಕದಲ್ಲಿ ಬರೆಯುತ್ತಾ ಹೋಗುತ್ತೇನೆ. ಓದುತ್ತಾ ಹೋಗಿ. ನಂಬಿಕೆ ಅಪನಂಬಿಕೆಯನ್ನ ಓದುಗರ ಭಾವನೆಗಳಿಗೆ ಬಿಟ್ಟು ಬಿಡುತ್ತೇನೆ. ಇದು ವೈಜ್ಞಾನಿಕ ಯುಗ. ಆದರೂ ಜನರಲ್ಲಿರೋ ಮೂಢನಂಬಿಕೆಗಳು ಮಾತ್ರ ಕರಗಿಲ್ಲ. ಎಲ್ಲಿಯವರೆಗೂ ಜನ ಮಾಟ-ಮಂತ್ರ, ಭೂತ-ಪ್ರೇತಕ್ಕೆ ಹೆದರುತ್ತಾರೋ ಅಲ್ಲಿಯವರೆಗೂ ಮಾಂತ್ರಿಕ ವಿದ್ಯೆ ಜೀವಂತವಾಗಿರುತ್ತದೆ. ಆಕಸ್ಮಿಕವಾಗಿ ಮನೆಯ ಮುಂದೊಂದು ಮೊಟ್ಟೆ ಒಡೆದು ಬಿದ್ದಿದ್ದರೆ, ಹಣ್ಣು-ಕಾಯಿ, ಅರಿಶಿನ-ಕುಂಕುಮ ಕೈ ಜಾರಿ ಯಾರ ಮನೆಯ ಮುಂದಾದರೂ ಬಿದ್ದರೆ ಅದಕ್ಕೆ ಮಾಟದ ರೆಕ್ಕೆ. ಮಂತ್ರದ ಪುಕ್ಕ ನೇತು ಬಿದ್ದಂತೆಯೇ…!

ಇನ್ನೇನಾದರೂ ನಿಂಬೆಹಣ್ಣು, ಒಣ ಮಡಿಕೆ, ಒಣ ಮೆಣಸಿನಕಾಯಿ,ಇದ್ದಿಲು ಪುಡಿ, ಮಸಿ, ರಂಗೋಲಿ, ಸೆಪ್ಪೆದಾರ, ಮನೆಯ ಅಂಗಳದಲ್ಲಿ ಕಾಣಿಸಿತು ಅಂದರೆ ಮುಗಿದೇ ಹೋಯಿತು. ಆ ಮನೆಯವರ ಮನಸ್ಸಿನಲ್ಲಿ ಒಂದು ರೀತಿಯ ಭಯ ಆವರಿಸಿ ಬಿಡುತ್ತದೆ. ಏನು ಮಾಡೋದೆಂದು ತೋಚದ ಚಡಪಡಿಕೆ. ಈ ಮಧ್ಯೆಯೇ ಆ ಮನೆಯಲ್ಲಿ ಯಾರಿಗಾದರೂ ಖಾಯಿಲೆ ಆವರಿಸಿತೆಂದರೆ ಮುಗಿದೇ ಹೋಯಿತು. ಯಾರೋ ಮಾಟ ಮಾಡಿಸಿದ್ದಾರೆ ಎಂದು ನಿರ್ಧರಿಸಲಾಗುತ್ತೆ. ಮರು ದಿನವೇ ಗುಡಿ- ಗೋಪುರದ ಪ್ರದಕ್ಷಿಣೆ. ವೈದರ ಬಳಿಗೆ ಹೋಗುವ ಮುನ್ನವೇ ಮಾಟ ತೆಗೆಸುವವರ ವಿಳಾಸಗಳನ್ನ ಹುಡುಕುವ ಜನರಿಗಾಗಿಯೇ ಈ ಲೇಖನ ಮಾಲಿಕೆ.

ಈ ಮಾಟ ಮಂತ್ರದ ಬಗ್ಗೆ ವೇದಗಳಲ್ಲೂ ವರ್ಣಿಸಲಾಗಿದೆ. 66 ಶಾಸ್ತ್ರಗಳು,16 ಪುರಾಣಗಳು ಹಾಗೂ 4 ವೇದಗಳಲ್ಲಿ ಬಗೆ ಬಗೆಯಾಗಿ ದಾಖಲಿಸಲಾಗಿದೆ ಅಂತ ಹೇಳಲಾಗುತ್ತೆ. ಪುರಾಣಗಳಲ್ಲಿ ಮಾಟ ಮಂತ್ರದ ಉಲ್ಲೇಖವಿದೆ. ಮಸಣ ರುದ್ರಿ ಮತ್ತು ಕಾಳಿಕಾದೇವಿ ಮಾಟಗಾರರ ಮನೆದೇವರು. ಅಮಾವಾಸ್ಯೆ ಹಾಗೂ ಹುಣ್ಣಿಮೆ ಮಾಂತ್ರಿಕರ ನೆಚ್ಚಿನ ದಿನಗಳು.

ಈ ಮಾಟ – ಮಂತ್ರ ವಿದ್ಯೆಗೆ ಮೂಲ ಪುರುಷರೆಂದರೆ ವಿಶ್ವಕರ್ಮ ಜನಾಂಗದ ಕೊತ್ತ ಮಲೆಯಾಳದ ಮಹಂತಾಚಾರಿ ವಂಶದವರು ಅಂತಾರೆ ಮಾಂತ್ರಿಕರು. ಇದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಸಿದ್ದಾಪ್ಪಾಜಿಯನ್ನ ಮೂಲ ಪುರುಷರು ಅಂತಾರೆ. ಇನ್ನು ಮಾಟ ಮಂತ್ರಕ್ಕೆ ಸರಿ ಸುಮಾರು 800 ವರ್ಷಗಳ ಇತಿಹಾಸವಿದೆಯಂತೆ. ಒಂದೊಂದು ಅಧ್ಯಾಯವನ್ನು ಇಲ್ಲಿ ದಾಖಲಿಸುತ್ತ ಹೋಗುತ್ತೇನೆ. ರೋಚಕತೆ, ನಿಗೂಢತೆ, ಕೌತುಕದಿಂದ ಕೂಡಿರುವ ಈ ನಿಗೂಢ ಮಾಂತ್ರಿಕರು ಲೇಖನ ಮಾಲಿಕೆ ಒಂದು ವಾಸ್ತವದ ಹುಡುಕಾಟ. ಮಂತ್ರಶಕ್ತಿಯ ಮೇಲಿರುವ ಜನರ ಮೂಢ ನಂಬಿಕೆ, ಅದನ್ನು ಮಾಂತ್ರಿಕರು ಬಳಸಿಕೊಳ್ಳುತ್ತಿರುವ ರೀತಿ ಬಗ್ಗೆ, ಅವರ ಆಚಾರ –ವಿಚಾರ, ಅಮಾವಾಸ್ಯೆಯ ರಾತ್ರಿಗಳು, ಭಾನಾಮತಿ, ಕ್ರೂರಶಕ್ತಿ, ಭಾವುಕ ಶಕ್ತಿ, ಒಲಿಸಿಕೊಳ್ಳವ ಘೋರ ವಿದ್ಯೆಗಳ ಬಗೆಗಿನ ಮಾಹಿತಿಯನ್ನ ಸಂಚಿಕೆ ರೂಪದಲ್ಲಿ ನಿಮ್ಮ ಮುಂದೆ ತೆರೆದಿಡುತ್ತೇನೆ..ಒಂದೊಂದು ಅಧ್ಯಾಯವೂ ಭಯಾನಕ..
ಮುಂದುವರೆಯುತ್ತದೆ…