ಉಡುಪಿ ಜಿಲ್ಲೆಯ ಗುಪ್ತ ರತ್ನ ಶ್ರೀ ಕಲ್ಲುಗಣಪತಿ

(Shri Kallu Ganapathi) ಆಧುನಿಕ ಯುಗದಲ್ಲಿ ತಾನು ನಿರ್ಮಿಸಿದ್ದೇ ಶ್ರೇಷ್ಠ ಎಂದು ಬೀಗುವ ಮನುಷ್ಯನ ಮುಂದೆ ಪ್ರಕೃತಿ ಅದಕ್ಕೂ ಮಿಗಿಲಾದುದ್ದನ್ನು ತೋರಿಸುತ್ತದಂತೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಈ ಉಡುಪಿ ಜಿಲ್ಲೆಯಲ್ಲಿನ ಗುಪ್ತ ರತ್ನ ಎಂದು ಕರೆಸಿಕೊಳ್ಳುವ ಶ್ರೀ ಕಲ್ಲುಗಣಪತಿ. 12 ನೇ ಶತಮಾನದಲ್ಲಿ ತುಳುನಾಡನ್ನು ಆಳುತ್ತಿದ್ದ ಭೂತಾಳ ಪಾಂಡ್ಯ ಎನ್ನುವ ರಾಜ ಈ ದೇವಾಲಯವನ್ನು ನಿರ್ಮಿಸಿದ್ದಾನೆ ಎನ್ನುವ ಪ್ರತೀತಿ ಇದೆ. ಬೃಹದಾಕಾರದ ಬಂಡೆಕಲ್ಲುಗಳ ನಡುವೆ ವಿರಾಜಮಾನನಾಗಿ ಗಣಪತಿಯ ಜೊತೆ ಶಿವ ಪಾರ್ವತಿಯರು ಇಲ್ಲಿ ನೆಲೆಸಿದ್ದಾರೆ.

ಮೂರು ಅಂತಸ್ತಿನ ಪ್ರಕೃತಿ ನಿರ್ಮಿತವಾದ ಕಲ್ಲುಬಂಡೆಗಳ ನಡುವೆ ಈ ಗುಹಾಂತರ ದೇವಾಲಯವಿದೆ ಎನ್ನುವುದು ಇಲ್ಲಿವ ವೈಶಿಷ್ಠ್ಯ. ಗದ್ದೆಯ ಮಧ್ಯೆಗಿನ ರಸ್ತೆಯಲ್ಲಿ ಸಾಗಿದರೆ ದೇವಸ್ಥಾನದ ಹೊರಗಿನ ಕಲ್ಲಿನ ಮೆಟ್ಟಿಲುಗಳು ಭಕ್ತರನ್ನಷ್ಟೇ ಅಲ್ಲದೇ ಪ್ರಕೃತಿ ಪ್ರಿಯರನ್ನು ಸ್ವಾಗತಿಸುತ್ತದೆ. ದೇವಾಲಯದ ಹೊರಗಡೆಯಿಂದ ತಲೆಯೆತ್ತಿ ನೋಡಿದರೆ ಬೃಹತ್‌ ಬಂಡೆಯಾಕಾರ ಹಾಗೂ ಅದರ ಸುತ್ತಲೂ ಆವರಿಸಿರುವ ನೀಲಗಾತ್ರದ ಮರಬಳ್ಳಿಗಳು ಎಂತವರನ್ನು ಕೂಡ ಮೈನವಿರೇಳಿಸುವಂತೆ ಮಾಡುತ್ತದೆ.

Shri Kallu Ganapathi: Shri Kallu Ganapathi is a hidden gem of Udupi district

ಇನ್ನೂ ಬಂಡೆ ಕಲ್ಲುಗಳ ನಡುವೆ ಒಳಹೊಗ್ಗುತ್ತಿದ್ದಂತೆ ಭಕ್ತರಿಗೆ ಸಾಮಾನ್ಯವಾಗಿ ಒಂದು ಪ್ರಶ್ನೆ ಕಾಡಿಯೇ ಕಾಡುತ್ತದೆ. ಜನರು ಸಾಗಲು ಕಷ್ಟವಾಗಿರುವ ಈ ಕಲ್ಲಿನ ಒಳಗೆ ಈ ಭವ್ಯ, ಸುಂದರ, ರಮಣೀಯ ದೇವಾಲಯವನ್ನು ನಿರ್ಮಿಸಿದ್ದು ಹೇಗೆ ಎಂಬುದು. ಅದು ನಿಜವೇ. ಏಕೆಂದರೆ ಏಕಕಾಲದಲ್ಲಿ ಓರ್ವ ವ್ಯಕ್ತಿ ಮಾತ್ರ ದೇವಾಲಯದ ಒಳಗೆ ಹೋಗಲು ಸಾಧ್ಯವಾಗುತ್ತದೆ. ಅಷ್ಟು ಕಿರಿದಾದ ದಾರಿಯಿದು. ದೇವರ ದರ್ಶನ ಪಡೆಯಬೇಕೆಂದರೆ ಬಗ್ಗಿಕೊಂಡೇ ಒಳಗೆ ಪ್ರವೇಶಿಸಬೇಕು. ನಿಜಕ್ಕೂ ಇಂತಹ ಸುಂದರ, ಪ್ರಕೃತಿ ದತ್ತವಾದ ದೇವಸ್ಥಾನವನ್ನು ಈ ಕಲ್ಲಿನ ಬಂಡೆಯೊಳಗೆ ನಿರ್ಮಿಸಿರುವುದು ಅಚ್ಚರಿಯೇ ಸರಿ.

Shri Kallu Ganapathi: Shri Kallu Ganapathi is a hidden gem of Udupi district

ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಉದ್ಭವ ಗಣಪತಿ ನೆಲೆಸಿರುವುದನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಗಣಪತಿಯ ಬದಲಾಗಿ ಶಿವ ಪಾರ್ವತಿಯರೇ ಇಲ್ಲಿ ಉದ್ಭವಿಗಳು ಎಂದು ನಂಬಲಾಗುತ್ತದೆ. ಇದು ಇಲ್ಲಿನ ಒಂದು ವಿಶೇಷತೆಯಾದರೆ, ಇಲ್ಲಿ ನೆಲೆಸಿರುವ ಗಣೇಶ ಚತುರ್ಭುಜನಾಗಿದ್ದು, ಎರಡು ಕೈಗಳು ವರದ ಹಸ್ತವನ್ನು ಸೂಚಿಸಿದರೆ ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತವಂತೆ. ಇನ್ನೂ ಇಲ್ಲಿ ಭಾರ್ಗವ ಪುರಾಣದ ಹಲವಾರು ಶಿಲ್ಪ ಕಲಾಕೃತಿಗಳು ಸಹ ಇವೆ.

Shri Kallu Ganapathi: Shri Kallu Ganapathi is a hidden gem of Udupi district

ಪ್ರಕೃತಿಯ ಮಡಿಲಲ್ಲಿ ಹಸಿರು ಹಾಸಿಗೆಯ ನಡುವೆ, ಮನಸ್ಸಿಗೆ ಮುದ ನೀಡುತ್ತ, ಹಸಿರು ಗಿಡಮೂಲಿಕೆಗಳು, ಪೊದೆಗಳು, ಗದ್ದೆ ಬಯಲುಗಳು, ನದಿಗಳು ಹಾಗೂ ಹುಲ್ಲು, ಬಂಡೆಕಲ್ಲುಗಳಿಂದಲೇ ಆವೃತವಾಗಿರುವ ಈ ಶಿಲಾಮಯ ದೇಗುಲದಲ್ಲಿ ತುಲಾಭಾರ ಸೇವೆ ವಿಶೇಷವಾದದ್ದು. ಇಲ್ಲಿ ಗಣೇಶ ಚತುರ್ತಿಯಂದು ಬರುವ ಭಕ್ತರಿಗೆ ಅನ್ನದಾನ ಸೇವೆ ನಡೆಯುತ್ತದೆ. ಜೊತೆಗೆ ಹಾಲು, ಸಕ್ಕರೆ, ದಾಲ್‌ ಹಾಗೂ ಜೇನುತುಪ್ಪದಿಂದ ತಯಾರಿಸಲ್ಪಟ್ಟ ಪ್ರಸಾದವನ್ನು ಕೂಡ ನೀಡಲಾಗುತ್ತದೆ.

ಇನ್ನೂ ಇಲ್ಲಿ ಸತ್ಯ ಗಣಪತಿ ವೃತ ಎಂಬ ಮಹತ್ವದ ವೃತಾಚರಣೆಯನ್ನು ಕೂಡ ಮಾಡಲಾಗುತ್ತದೆ. ಇದು ಮದುವೆಯಾಗದ ಹೆಣ್ಣುಮಕ್ಕಳು, ಅಥವಾ ಮದುವೆಯ ಸಂದರ್ಭದಲ್ಲಿ ಒಳ್ಳೆಯ ವರ ದೊರಕುವಂತೆ ಬೇಡಿಕೊಳ್ಳುವ ಸಲುವಾಗಿ ಈ ವೃತವನ್ನು ಆಚರಿಸಲಾಗುತ್ತದೆ. ಈ ವೃತದ ಮೂಲಕ ಗಣೇಶನಿಗೆ ಕಬ್ಬು, ತೆಂಗಿನಕಾಯಿ, ಮೋದಕ, ಹಣ್ಣು ಹಾಗೂ ಕಡುಬನ್ನು ಅರ್ಪಿಸಿ ವೃತ ಸಂಪನ್ನ ಮಾಡಲಾಗುತ್ತದೆ. ಇನ್ನೂ ವಿಶೇಷ ಸಂದರ್ಭಗಳಲ್ಲಿ ( ಗಣೇಶ ಚತುರ್ಥಿ, ಸಂಕ್ರಾಂತಿ, ಸಂಕಷ್ಟ ಚತುರ್ಥಿ) ಹಾಗೂ ವಾರ್ಷಿಕ ಉತ್ಸವದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ.

Shri Kallu Ganapathi: Shri Kallu Ganapathi is a hidden gem of Udupi district

ಈಗಾಗಲೇ ಈ ದೇವಸ್ಥಾನ ಯಾವುದು ಎನ್ನುವುದರ ಬಗ್ಗೆ ಸುಳಿವು ಸಿಕ್ಕಿರುತ್ತದೆ. ನಿಜ ದೇವಾಲಯಗಳ ಬೀಡು ಎಂತಲೇ ಕರೆಸಿಕೊಳ್ಳುವ ಬಾರ್ಕೂರಿನ ಸಮೀಪದಲ್ಲಿಯೇ ಈ ದೇವಸ್ಥಾನ ಕಾಣಸಿಗುತ್ತದೆ. ಇದೇ ವಾಸ್ತುಶಿಲ್ಪದ ಮಹತ್ವಾಕಾಂಕ್ಷೆಯಿಂದ ಸುಂದರವಾಗಿ ಕಾಣುವ ಶಿರಿಯಾರ ಗ್ರಾಮದ ಅತ್ಯಂತ ಹಳೆಯ ಪುರಾತನ ದೇವಾಲಯಗಳಲ್ಲಿ ಒಂದಾದ ಪಡುಮುಂಡುವಿನ ಶ್ರೀ ಕಲ್ಲುಗಣಪತಿ ದೇವಸ್ಥಾನ. ದಿವಂಗತ ತಿಮ್ಮಪ್ಪ ಅಡಿಗರ ಉತ್ತರಾಧಿಕಾರಿಯಿಂದ ಈ ದೇವಾಲಯ ಇನ್ನೂ ಕೂಡ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

Shri Kallu Ganapathi: Shri Kallu Ganapathi is a hidden gem of Udupi district

ಈ ದೇವಾಲಯ ದೇವಾಲಯಗಳ ಬೀಡು ಎಂದು ಕರೆಸಿಕೊಳ್ಳುವ ಬಾರ್ಕೂರಿನಿಂದ 6 ಕಿ.ಮೀ. ದೂರದಲ್ಲಿದೆ. ಬಾರ್ಕೂರು, ಸೈಬ್ರಕಟ್ಟೆ, ಶಿರಿಯಾರ ಮಾರ್ಗವಾಗಿ ಬಂದರೆ ಶಿರಿಯಾರ ಪಡುಮುಂಡು ರಸ್ತೆಯಲ್ಲಿ ಸಾಗಿದರೆ ಈ ದೇವಸ್ಥಾನ ಸಿಗುತ್ತದೆ.

ಇದನ್ನೂ ಓದಿ : BenneKudru Sri Kulamahastri: ಮೊಗವೀರ ಸಮಾಜದ ಆರಾಧ್ಯ ದೇವಿ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮ

ಇದು ನಂಬಿಕಸ್ತರಿಗೆ ಮಾತ್ರ;
ಭಕ್ತಿ ಭಾವದಿಂದ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತರೆ, ದೇವರನ್ನು ಪೂಜಿಸಿದರೆ ಮಾತ್ರವೇ ಇಷ್ಟಾರ್ಥಗಳು ನೆರವೇರುತ್ತದೆ. ಇದರ ಬದಲಾಗಿ, ಪ್ರವಾಸಿ ತಾಣ, ಚಿತ್ರಿಕರಣಕ್ಕೆ ಸೂಕ್ತ ತಾಣ ಎಂದುಕೊಂಡು ಬಂದರೆ ಅವರಿಗೆ ಸೋಲು ಖಚಿತ ಎನ್ನುವುದು ಜನರ ನಂಬಿಕೆ. ಅದಕ್ಕೆ ಉದಾಹರಣೆಯಂತೆ ಅದೆಷ್ಟೋ ಕನ್ನಡದ ಅದ್ಭುತ ಕಥೆಗಳನ್ನು ಹೊಂದಿದ ಸುಮಾರು ಚಿತ್ರದ ಚಿತ್ರಿಕರಣ ಈ ಸ್ಥಳದಲ್ಲಿ ನಡೆದಿದ್ದವು. ಆದರೆ ಯಾವುದು ಕೂಡ ತೆರೆ ಮೇಲೆ ಬಂದಿಲ್ಲ. ಎಲ್ಲವೂ ನೆಲಕಚ್ಚಿವೆ ಎಂದು ತಿಳಿದವರು ಹೇಳುತ್ತಾರೆ.

Shri Kallu Ganapathi: Shri Kallu Ganapathi is a hidden gem of Udupi district

Comments are closed.