ಚೈನೈ: ಬೆಳಗ್ಗೆಯಿಂದ ರಾತ್ರಿಯವರೆಗೆ ಮನೆಯಲ್ಲೇ ನಡುಬಗ್ಗಿಸಿ ಕಸ,ಪಾತ್ರೆ,ಬಟ್ಟೆ,ಅಡುಗೆ,ತಿಂಡಿ ಅಂತೆಲ್ಲ ದುಡಿಯೋ ಗೃಹಿಣಿಯರಿಗೆ ನಮ್ಮದೇನು ಸಂಬಳ ಇಲ್ಲದ ದುಡಿಮೆ ಅನ್ನೋ ಬೇಸರ. ಆದರೇ ತಮಿಳುನಾಡಿನ ಗೃಹಿಣಿಯರು ಮಾತ್ರ ಮನೆಗೆಲಸಕ್ಕೂ ಸಂಬಳ ಪಡೆಯೋ ಅದೃಷ್ಟಶಾಲಿಗಳಾಗುವ ದಿನಗಳು ದೂರವಿಲ್ಲ. ಅದ್ಯಾಕೆ ಅಂತಿರಾ ಈ ಸ್ಟೋರಿ ಓದಿ.

ತಮಿಳುನಾಡಿನ ವಿಧಾನಸಭಾ ಚುನಾವಣೆ ಅಲ್ಲಿನ ರಾಜಕೀಯದಲ್ಲೇ ಹೊಸ ಮನ್ವಂತರ ಸೃಷ್ಟಿಸುವ ಮುನ್ಸೂಚನೆ ನೀಡಿದ್ದು, ಇಬ್ಬರು ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ರಾಜಕೀಯ ಪ್ರವೇಶಿಸಿದ್ದಾರೆ. ಈ ಪೈಕಿ ಬಹುಭಾಷಾ ನಟ ಕಮಲ್ ಹಾಸನ್ ಮಕ್ಕಳ್ ನಿಧಿ ಮೈಯಂ ಪಕ್ಷದ ಮೂಲಕ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ನಿನ್ನೆಯಷ್ಟೇ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿರುವ ಕಮಲ್ ಹಾಸನ್, ತನ್ನ ಪಕ್ಷ ಅಧಿಕಾರಕ್ಕೆ ಬಂದ್ರೇ ಮನೆಯಲ್ಲಿ ದುಡಿಯುವ ಗೃಹಿಣಿಯರಿಗೆ ಪ್ರತಿತಿಂಗಳು ಸಂಬಳ ನೀಡುವುದಾಗಿ ಘೋಷಿಸಿದ್ದಾರೆ. ನಿನ್ನೆ ಪಕ್ಷ ಸೇರ್ಪಡೆಗೊಂಡ ನಿವೃತ್ತ ಐಎಎಸ್ ಅಧಿಕಾರಿ ಸಮ್ಮುಖದಲ್ಲಿ ಪಕ್ಷದ ಮಿನಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಕಮಲ್ ಹಾಸನ್ ಹಲವು ಆಕರ್ಷಕ ಯೋಜನೆ ಘೋಷಿಸಿದ್ದಾರೆ.
1.ಮನೆಯಲ್ಲೇ ದುಡಿಯುವ ಹೆಣ್ಣುಮಕ್ಕಳ ಶ್ರಮ ಗುರುತಿಸಿ ಅವರಿಗೂ ಪ್ರತಿತಿಂಗಳು ಸಂಬಳ ನೀಡುವುದು.
2.ರಾಜ್ಯದ ಎಲ್ಲ ಮನೆಗಳಿಗೂ ಹೈಸ್ಪೀಡ್ ಇಂಟರನೆಟ್ ವಿತ್ ಕಂಪ್ಯೂಟರ್ ವಿತರಣೆ
3.ಇಂಟರನೆಟ್ ಮನುಷ್ಯನ ಮೂಲಭೂತ ಹಕ್ಕೆಂದು ಘೋಷಣೆ
4.ರೈತರನ್ನು ಕೇವಲ ಅನ್ನದಾತರು ಮಾತ್ರವಲ್ಲ ಕೃಷಿ ಉದ್ಯಮಿಗಳಾಗಿ ರೂಪಿಸುವುದು
5.ಬಡತನ ರೇಖೆಗಿಂತ ಕೆಳಗಿರುವವರ ಜೀವನ ಅಭಿವೃದ್ಧಿಗೊಳಿಸಿ ಅವರನ್ನು ಸಮೃದ್ಧಿ ರೇಖೆಗೆ ಕರೆತರುವುದು.
6.ಜನರಿಗೆ ಅಗತ್ಯ ಪ್ರಮಾಣ ಪತ್ರಗಳನ್ನು ಅವರು ಅರ್ಜಿ ಹಾಕಿ ಅಲೆಯುವ ಸ್ಥಿತಿ ಇಲ್ಲದೆಯೇ ಅವರ ಸ್ಮಾರ್ಟ್ ಪೋನ್ ಗಳಿಗೆ ರವಾನಿಸುವುದು.
7.ಲಂಚದ ಪ್ರವೃತ್ತಿ ತಡೆಯಲು ಸರ್ಕಾರಿ ಕಚೇರಿಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ

ಹೀಗೆ 7 ಅಂಶದ ಮಿನಿ ಪ್ರಣಾಳಿಕೆಯನ್ನು ಕಮಲ್ ಹಾಸನ್ ಘೋಷಿಸಿದ್ದು, ಇವುಗಳ ಪೈಕಿ ಗೃಹಿಣಿಯ ಮನೆ ನಿರ್ವಹಣೆಗೆ ಸಂಬಳ ನೀಡುವ ಭರವಸೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಮಲ್ ಹಾಸನ್ ಈ ಪ್ರಣಾಳಿಕೆ ಹರಿದಾಡುತ್ತಿದ್ದು, ಪರ ಹಾಗೂ ವಿರೋಧ ಚರ್ಚೆ ಆರಂಭವಾಗಿದೆ.