Ugadi festival 2023: ಚೈತ್ರಮಾಸದಲ್ಲಿ‌‌ ಚಿಗುರೆಲೆ ಚಿಗುರಿ ಹೊಸ ಹರ್ಷವನ್ನು ತರುವ ಹಬ್ಬ ಯುಗಾದಿ

(Ugadi festival 2023) ಬದುಕಿನ ಹಳೆಯ ನೋವುಗಳನ್ನು ಮನಸ್ಸಿನಿಂದ ತೊಡೆದು ಹಾಕಿ ಉಲ್ಲಾಸದಿಂದ ಹೊಸ ವರ್ಷವನ್ನು ಉತ್ಸಾಹದಿಂದ ಸ್ವಾಗತಿಸುವ ದಿನವಿದಾಗಿದೆ. ತನ್ನ ಎಲೆಗಳನ್ನು ಉದುರಿಸಿಕೊಂಡು ಮತ್ತೆ ಚಿಗುರೊಡೆಯುವ ಪ್ರಕೃತಿಗೆ ಮತ್ತೆ ಹೊಸ ರೂಪ, ಹೊಸ ಉತ್ಸಾಹ ತರುವ ದಿನವಿದಾದರೆ, ಭಾರತೀಯರ ಪಾಲಿಗೆ ಇದು ಹೊಸ ಸಂವತ್ಸರದ ಮೊದಲ ದಿನವಾಗಿದೆ. ‘ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು.

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನದಲ್ಲಿನ ಕಷ್ಟ-ಸುಖ, ನೋವು ನಲಿವುಗಳ ಸಮ್ಮಿಶ್ರಣವಾಗಿದ್ದು, ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ಇನ್ನೂ ಯುಗಾದಿಯನ್ನು ಚಂದ್ರಮಾನ-ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಎನ್ನುವರು. ಹಾಗೂ ಸೂರ್ಯ ಮೇಷರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು. ದಕ್ಷಿಣ ಭಾರತೀಯರು ಚಾಂದ್ರಮಾನವನ್ನು ಅನುಸರಿಸಿ ಚೈತ್ರಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುತ್ತಿರುವರು.

ಯುಗಾದಿ ಸಂಸ್ಕೃತಿ :
ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇವೆ. ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.

ಯುಗಾದಿ ಆಚರಣೆಗಳು :
ಯುಗಾದಿ ಹಬ್ಬದಂದು ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸುವರು. ಅದರಲ್ಲೂ ತೆಲುಗಿನವರು ಬ್ರಹ್ಮ ಮತ್ತು ವಿಷ್ಣು ದೇವರನ್ನು ದಿನದಂದು ಪೂಜಿಸುವರು. ಯುಗಾದಿ ದಿನವು ತುಂಬಾ ವಿಶೇಷವಾಗಿರುವ ಕಾರಣದಿಂದಾಗಿ ಮಹಿಳೆಯರು ಬೇಗನೆ ಎದ್ದು, ಸ್ನಾನ ಮಾಡಿ ಮನೆಯ ಮುಂಭಾಗದಲ್ಲಿ ರಂಗೋಲಿ ರಚಿಸುವರು. ಈ ರಂಗೋಲಿಯ ಬಣ್ಣಗಳು ಮನೆಯೊಳಗಡೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಹೆಚ್ಚಾಗಿ ಎಣ್ಣೆಸ್ನಾನ ಮಾಡಲಾಗುತ್ತದೆ. ಪ್ರತಿಯೊಬ್ಬರು ಎಣ್ಣೆ ಸ್ನಾನ ಮಾಡಿದ ಬಳಿಕ ಮನೆಯಲ್ಲಿ ಪೂಜೆ ಮಾಡುವರು. ಪೂಜೆ ಬಳಿಕ ಬೇವು ಬೆಲ್ಲ ಹಾಕಿರುವಂತಹ ಪ್ರಸಾದವನ್ನು ಹಂಚಲಾಗುತ್ತದೆ. ಯುಗಾದಿಯಂದು ಮನೆಯ ಹಿರಿಯರು ಅಥವಾ ಅರ್ಚಕರು ಪಂಚಾಂಗವನ್ನು ಓದುವರು. ಇದರ ಪ್ರಕಾರವಾಗಿ ಮನೆಯ ಇತರ ಸದಸ್ಯರು ಇದನ್ನು ಮುಂದಿನ ವರ್ಷಕ್ಕೆ ತಮಗೆ ಅನುಕೂಲಕರವೇ ಎಂದು ನೋಡುವರು. ಇದನ್ನು ಪಂಚಾಂಗ ಶ್ರವಣಂ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : Ugadi 2023: ಯುಗಾದಿ ಹಬ್ಬ ಆಚರಣೆಯ ಹಿಂದಿನ ಇತಿಹಾಸ ಹಾಗೂ ಮಹತ್ವ ನಿಮಗಾಗಿ

Ugadi festival 2023: Ugadi is a festival that brings new joy in the month of Chaitramasa.

Comments are closed.