ಬೆಂಗಳೂರು : ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿರೋ ಟೀಂ ಇಂಡಿಯಾ ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯಕ್ಕಾಗಿ ಸೆಣೆಸಾದಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದ್ದ ಟೀಂ ಇಂಡಿಯಾ, ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತ್ತು. ಹೀಗಾಗಿ ಸರಣಿಯನ್ನು 1 -1 ಅಂತರದಿಂದ ಸಮಬಲ ಸಾಧಿಸಿದೆ. ಭಾರತ ಎರಡನೇ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಅಂತಿಮ ಪಂದ್ಯಕ್ಕೂ ಆಡಿಸೋ ಸಾಧ್ಯತೆಯಿದೆ.

ಶಿಖರ್ ಧವನ್ ಅವರು ಬ್ಯಾಟಿಂಗ್ ವೇಳೆ ಚೆಂಡು ತಗುಲಿಸಿಕೊಂಡಿದ್ದರು. ರೋಹಿತ್ ಪೀಲ್ಡಿಂಗ್ ವೇಳೆ ಬೌಂಡರಿ ತಡೆಯುವ ಭರದಲ್ಲಿ ಎಡ ಭಜಕ್ಕೆ ತಗುಲಿಸಿಕೊಂಡಿದ್ದರು. ಇದೀಗ ಇವರಿಬ್ಬರ ಗಾಯದ ಪ್ರಮಾಣದ ಆಧಾರದ ಮೇಲೆ ಇಬ್ಬರೂ ತಂಡದಿಂದ ಹೊರಗುಳಿಯೋ ಸಾಧ್ಯತೆಯಿದೆ. ಗಾಯದಿಂದ ಹೊರಗುಳಿದಿರೋ ಪಂತ್ ಬದಲು ಕೀಪಿಂಗ್ ಗ್ಲೌಸ್ ತೊಟ್ಟಿದ್ದ ಕೆ.ಎಲ್.ರಾಹುಲ್ ಅಂತಿಮ ಪಂದ್ಯದಲ್ಲಿಯೂ ವಿಕೆಟ್ ಕೀಪಿಂಗ್ ಹೊಣೆಯನ್ನು ನಿಭಾಯಿಸಲಿದ್ದಾರೆ. ಭಾರತ ತಂಡ ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.

ಇನ್ನು ಆಸ್ಟ್ರೇಲಿಯಾ ತಂಡ ಕೂಡ ಬಲಿಷ್ಟವಾಗಿದ್ದು, ಕಳೆದೆರಡು ಪಂದ್ಯಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ. ಆಸ್ಟ್ರೇಲಿಯಾ ಆಟಗಾರರಿಗೆ ಐಪಿಎಲ್ ಅನುಭವ ಸರಣಿಯಲ್ಲಿ ಸಹಕಾರಿಯಾದಂತಿದೆ. ಬ್ಯಾಟಿಂಗ್ ಕ್ರಮಾಂಕ ಬಲಿಷ್ಟವಾಗಿದ್ದರೂ ಕಳೆದ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಕೈಕೊಟ್ಟಿತ್ತು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಬೆಂಗಳೂರಿನ ಪಿಚ್ ಬ್ಯಾಟಿಂಗ್ ಗೆ ಹೆಚ್ಚು ಸಹಕಾರಿಯಾಗೋದ್ರಿಂದ ನಿರ್ಣಾಯಕ ಪಂದ್ಯದಲ್ಲಿ ರನ್ ಹೊಳೆ ಹರಿಯೋ ಎಲ್ಲಾ ಸಾಧ್ಯತೆಯಿದೆ.
ಸಮಯ: ನಾಳೆ ಮಧ್ಯಾಹ್ನ 01:30 ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ತಂಡಗಳು :
ಭಾರತ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್ ರಾಹುಲ್(ವಿ.ಕೀ), ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಾಹಲ್, ಕೇದಾರ್ ಜಾದವ್, ಮನೀಷ್ ಪಾಂಡೆ,ನವದೀಪ್ ಸೈನಿ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್.
ಆಸ್ಟ್ರೇಲಿಯಾ : ಆ್ಯರೋನ್ ಫಿಂಚ್ (ನಾಯಕ), ಅಲೆಕ್‌ಸ್ ಕ್ಯಾರಿ (ಉಪ ನಾಯಕ, ವಿ.ಕೀ), ಮಾರ್ನಸ್ ಲಾಬುಶೇನ್, ಕೇನ್ ರಿಚರ್ಡ್‌ಸನ್, ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ. ಪ್ಯಾಟ್ ಕಮಿನ್ಸ್, ಅಸ್ಟನ್ ಅಗರ್, ಪೀಟರ್ ಹ್ಯಾಂಡ್ಸ್ ಕೊಂಬ್, ಜೋಶ್ ಹೇಜಲ್‌ವುಡ್.