ನಟಿ ರಶ್ಮಿಕಾ ಮಂದಣ್ಣಗೆ ಐಟಿ ನೋಟಿಸ್, ಜ.21ಕ್ಕೆ ವಿಚಾರಣೆಗೆ ಹಾಜರಾಗಲೇ ಬೇಕು

0

ಬೆಂಗಳೂರು : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಿಲುಕಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹೀಗಾಗಿ ರಶ್ಮಿಕಾ ಜನವರಿ 21ರಂದು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗಲೇ ಬೇಕಾಗಿದೆ. ಐಟಿ ಅಧಿಕಾರಿಗಳು ರಶ್ಮಿಕಾ ಮಂದಣ್ಣ ಹಾಗೂ ಅವರ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಅವರಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಿದ್ದು, ಬೆಂಗಳೂರಿನಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕುಕ್ಲೂರು ಗ್ರಾಮದಲ್ಲಿರುವ ರಶ್ಮಿಕಾ ಮಂದಣ್ಣ ಅವರ ಮನೆ, ಕಚೇರಿ, ಕಲ್ಯಾಣಮಂಟಪ ಸೇರಿದಂತೆ ಹಲವು ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಎರಡು ತಂಡ ದಾಳಿ ನಡೆಸಿತ್ತು. ಕುಕ್ಲೂರಿನ ಮನೆ, ಸೆರೆನಿಟಿ ಹಾಲ್ ಸೇರಿದಂತೆ ರಶ್ಮಿಕಾ ತಂದೆ ಮದನ್ ಮಂದಣ್ಣಗೆ ಸೇರಿದ ಕಾಫಿ ಎಸ್ಟೇಟ್ ಮತ್ತಿತರ ಕಡೆಯೂ ಅಧಿಕಾರಿಗಳು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿಪಾಸ್ತಿ ಪತ್ತೆಯಾಗಿತ್ತು. ಕೆಲವೊಂದು ವ್ಯವಹಾರಗಳಿಗೆ ರಶ್ಮಿಕಾ ತೆರಿಗೆ ಪಾವತಿಸಿಲ್ಲಾ ಅನ್ನೋದು ದಾಳಿಯ ವೇಳೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಐಟಿ ಅಧಿಕಾರಿಗಳು ನೋಟಿಸ್ ನೀಡಿ, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.