WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 2 ಎಫ್ಐಆರ್ : ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳ ಪ್ರತಿಭಟನೆ

ಹೊಸದಿಲ್ಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥರನ್ನು ಜೈಲಿಗೆ ಕಳುಹಿಸುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಧರಣಿ ನಿರತ ಕುಸ್ತಿಪಟುಗಳು ಘೋಷಿಸಿದ್ದಾರೆ. ಇನ್ನೊಂದೆಡೆಯಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವೀಕರಿಸಲು ಸಿದ್ಧ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ( Brij Bhushan Sharan Singh ) ಅವರನ್ನು ಕಂಬಿ ಹಿಂದೆ ಕಳುಹಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಲೈಂಗಿಕ ಕಿರುಕುಳದ ಆರೋಪದ ಎದುರಿಸುತ್ತಿರುವ WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಇತರ ಅನೇಕ ಕುಸ್ತಿಪಟುಗಳು WFI ಮುಖ್ಯಸ್ಥರ ವಿರುದ್ಧದ ಪ್ರತಿಭಟನೆ ಭಾಗಿಯಾಗಿದ್ದಾರೆ. ಈ ನಡುವಲ್ಲೇ ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಆಧಾರದ ಮೇಲೆ ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿದೆ. ಈ ಪೈಕಿ ಮೊದಲ ಪ್ರಕರಣದಲ್ಲಿ ಅಪ್ರಾಪ್ತ ಕ್ರೀಡಾಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಸಿದ್ದರು. ಆದರೆ ಪ್ರತಿಭಟನೆ ಆರನೇ ದಿನಕ್ಕೆ ಮುಂದುವರಿಯುತ್ತಿದ್ದಂತೆಯೇ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಮ್ಮ ಬೆಂಬಲಕ್ಕೆ ಬಂದ ಎಲ್ಲಾ ಕ್ರೀಡಾಪಟುಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಭಿನವ್ ಬಿಂದ್ರಾ ಮತ್ತು ನೀರಜ್ ಚೋಪ್ರಾ ಅವರು ಕ್ರೀಡಾಪಟುಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಕಾರಣ ನಮಗೆ ಬೆಂಬಲ ನೀಡಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಶೀಘ್ರವೇ ಜೈಲಿಗೆ ಹಾಕಬೇಕು. ಅವನು ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಮುಂದುವರಿಸುತ್ತಾನೆ ಮತ್ತು ಅವನನ್ನು ಕಂಬಿಯ ಹಿಂದೆ ಹಾಕಬೇಕಾಗುತ್ತದೆ. ಅವರು ಜೈಲಿಗೆ ಹೋಗುವವರೆಗೂ ಪ್ರತಿಭಟನೆ ನಡೆಸುತ್ತೇವೆ. ದೆಹಲಿ ಪೊಲೀಸರು ಆತನ ಮೇಲೆ ಹೇರಿರುವ ಸೆಕ್ಷನ್‌ಗಳನ್ನೂ ನೋಡಬೇಕು. ಎಫ್‌ಐಆರ್ ನಂತರ ನಮ್ಮ ಪ್ರತಿಭಟನೆ ಮುಗಿಯುತ್ತದೆ ಎಂದು ಭಾವಿಸಿದ ಜನರು ತಪ್ಪು ಮತ್ತು ಅದರ ಬಗ್ಗೆ ನಿರ್ಧರಿಸಲು ನಾವು ನಮ್ಮ ಹಕ್ಕನ್ನು ಹೊಂದಿದ್ದೇವೆ. ಪ್ರತಿಭಟಿಸುವ ನಮಗೆಲ್ಲರಿಗೂ ಭದ್ರತೆ ಬೇಕು ಮತ್ತು ದೂರುದಾರರಿಗೆ ಭದ್ರತೆ ಬೇಕು ಏಕೆಂದರೆ ನಮಗೆ ಯಾರು ಹಾನಿ ಮಾಡಲು ಬಯಸುತ್ತಾರೆ ಎಂದು ನಿಮಗೆ ತಿಳಿದಿಲ್ಲ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

WFI ಮುಖ್ಯಸ್ಥರ ( Brij Bhushan Sharan Singh ) ವಜಾಕ್ಕೆ ಆಗ್ರಹ : ಪ್ರಧಾನಿ ಮೋದಿಗೆ ಮನವಿ

WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ವಜಾಗೊಳಿಸುವಂತೆ ವಿನೇಶ್‌ ಪೋಗಟ್‌ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾವು ದೆಹಲಿ ಪೊಲೀಸರನ್ನು ನಂಬುವುದಿಲ್ಲ, ಅವರು ಎಫ್‌ಐಆರ್ ದಾಖಲಿಸಲು 6 ದಿನಗಳನ್ನು ತೆಗೆದುಕೊಂಡರು. ಅವರು ಏನು ಮಾಡುತ್ತಾರೆಂದು ನಾವು ನೋಡುತ್ತೇವೆ. ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಜೈಲಿಗಟ್ಟುವ ನಮ್ಮ ನಿಲುವಿನಲ್ಲಿ ನಾವು ಅಚಲರಾಗಿದ್ದೇವೆ. ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಅವರ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕುವಂತೆ ನಾನು ಭಾರತದ ಪ್ರಧಾನಿಗೆ ಮನವಿ ಮಾಡುತ್ತೇನೆ. ಇದು ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದೆ ಮತ್ತು ನಮ್ಮ ಬೆಂಬಲಕ್ಕೆ ಬರುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ. ಎಲ್ಲಾ ಹೆಸರಾಂತ ಕ್ರೀಡಾಪಟುಗಳು ಮುಂದೆ ಬಂದು ನಮ್ಮನ್ನು ಬೆಂಬಲಿಸಬೇಕು ಈ ಮೂಲಕ ಭಾರತೀಯ ಕ್ರೀಡೆಗಳನ್ನು ಉಳಿಸಬೇಕು. ಅವರು ಇಂದು ಹೊರಬರದಿದ್ದರೆ, ಅವರು ಎಂದಿಗೂ ಭಾರತದ ಕ್ರೀಡಾ ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ವಿನೇಶ್ ಫೋಗಟ್ ತಿಳಿಸಿದ್ದಾರೆ.

ದೆಹಲಿ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ, ಅವರು ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಎಫ್‌ಐಆರ್ ದಾಖಲಿಸಿದ್ದಾರೆ. ನಾವು ನ್ಯಾಯಯುತ ತನಿಖೆಗೆ ಒತ್ತಾಯಿಸುತ್ತೇವೆ. ಬ್ರಿಜ್ ಭೂಷಣ್ ಅವರನ್ನು ಎಲ್ಲಾ ಸ್ಥಾನಗಳಿಂದ ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ ಮತ್ತು ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಮತ್ತು ನಂತರವೇ ನಾವು ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತೇವೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ನಾನು ಎಲ್ಲಿಯೂ ಓಡಿ ಹೋಗಿಲ್ಲ : ಬ್ರಿಜ್ ಭೂಷಣ್ ಶರಣ್ ಸಿಂಗ್

ಬ್ರಿಜ್ ಭೂಷಣ್ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ‌ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದು, ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ ಮತ್ತು ನ್ಯಾಯಾಲಯವು ಯಾವುದೇ ನಿರ್ಧಾರವನ್ನು ಸ್ವೀಕರಿಸುತ್ತದೆ ಎಂದು ಹೇಳಿದರು. ಇತ್ತ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪೊಲೀಸ್ ತನಿಖಾ ಪ್ರಕ್ರಿಯೆಯನ್ನು ನಾನು ನಂಬುತ್ತೇನೆ. ತನಿಖೆಯಲ್ಲಿ ನನ್ನ ಸಹಕಾರ ಅಗತ್ಯವಿರುವಲ್ಲೆಲ್ಲಾ ನಾನು ಸಹಕರಿಸುತ್ತೇನೆ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಪ್ರಕರಣದ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ನಾನು ತಪ್ಪಿಸಿಕೊಂಡಿಲ್ಲ. ನಾನು ನನ್ನ ನಿವಾಸದಲ್ಲಿದ್ದೇನೆ ಎಂದು ಅವರು ಹೇಳಿದರು.

ನೀರಜ್‌ ಚೋಪ್ರಾ ಬೆಂಬಲ :

ಇನ್ನು ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಒಲಿಂಪಿಕ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಕೂಡ ಬೆಂಬಲ ಸೂಚಿಸಿದ್ದಾರೆ. ಕ್ರೀಡಾಪಟುಗಳು ನ್ಯಾಯಕ್ಕಾಗಿ ಬೀದಿಗೆ ಇಳಿದಿರುವುದನ್ನು ನೋಡಲು ನನಗೆ ನೋವುಂಟಾಗುತ್ತದೆ. ಈ ಕ್ರೀಡಾಪಟುಗಳು ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಲು, ನಾವು ಹೆಮ್ಮೆ ಪಡಲು ಶ್ರಮಿಸಿದ್ದಾರೆ ಎಂದು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶುಕ್ರವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಒಂದು ರಾಷ್ಟ್ರವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸಮಗ್ರತೆ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮದು, ಕ್ರೀಡಾಪಟು ಅಥವಾ ಇಲ್ಲ. ಏನು ನಡೆಯುತ್ತಿದೆಯೋ ಅದು ಎಂದಿಗೂ ಸಂಭವಿಸಬಾರದು. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ರೀತಿಯಲ್ಲಿ ವ್ಯವಹರಿಸಬೇಕು. ನ್ಯಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಚೋಪ್ರಾ ಹೇಳಿದ್ದಾರೆ.

Comments are closed.