ಟೀ ಇಂಡಿಯಾದ ಖ್ಯಾತ ಆಟಗಾರ ಭುವನೇಶ್ವರ್ ಕುಮಾರ್ ಅವರ ತಂದೆ ಸಾವನ್ನಪ್ಪಿದ್ದಾರೆ. ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಪಿತ್ತ ಜನಕಾಂಗದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೀರತ್ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ.
63 ವರ್ಷ ಪ್ರಾಯದ ಕಿರಣ್ ಪಾಲ್ ಸಿಂಗ್ ಅವರು 2020ರ ಸಪ್ಟೆಂಬರ್ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿರಣ್ ಪಾಲ್ ಸಿಂಗ್ ನವದೆಹಲಿಯ ಆಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗುವ ಮೊದಲು ಕುಟುಂಬವು ಯುಕೆ ತಜ್ಞರನ್ನು ಸಂಪರ್ಕಿಸಿತ್ತು. ಕಳೆದ ಎರಡು ವಾರಗಳಿಂದ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತ್ತು. ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆತರಲಾಗಿತ್ತು. ಆದ್ರೆ ಎರಡು ದಿನಗಳ ಕಾಲ ಅವರು ನಿಧನರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ರದ್ದಾದ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಅವರು ತಂದೆಯ ಆರೋಗ್ಯದ ಕಾಳಜಿಯನ್ನು ಮಾಡುತ್ತಿದ್ದರು. ಕಿರಣ್ ಪಾಲ್ ಸಿಂಗ್ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಿರಣ್ ಪಾಲ್ ಸಿಂಗ್ ಅವರು ಪತ್ನಿ ಇಂದ್ರೇಶ್ ದೇವಿ ಮತ್ತು ಮಕ್ಕಳಾದ ಭುವನೇಶ್ವರ್ ಕುಮಾರ್ ಮತ್ತು ರೇಖಾ ಅವರನ್ನು ಅಗಲಿದ್ದಾರೆ.
