ಬರ್ಮಿಂಗ್’ಹ್ಯಾಮ್: (Cheteshwar Pujara hits 73 ball Century ) ಚೇತೇಶ್ವರ್ ಪೂಜಾರ ಅವರನ್ನು ಟೆಸ್ಟ್ ಸ್ಪೆಷಲಿಸ್ಟ್ ಅಂತ ಕರೀತಾರೆ. 34 ವರ್ಷದ ಬಲಗೈ ಬ್ಯಾಟ್ಸ್’ಮನ್ ಪೂಜಾರ ಭಾರತ ಟೆಸ್ಟ್ ತಂಡದ ಆಧಾರಸ್ಥಂಭವೂ ಹೌದು. 2018ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ಕಾರಣವಾಗಿದ್ದು ಪೂಜಾರ ಅವರ ತಾಳ್ಮೆಯ ಆಟ.
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ (Cheteshwar Pujara) 73 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ ಅಂದ್ರೆ ನಂಬ್ತೀರಾ? ನಂಬ್ಲೇಬೇಕು. ಇಂಗ್ಲೆಂಡ್’ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿಯ (Royal London ODI cup) ಪಂದ್ಯದಲ್ಲಿ ವಾರ್ವಿಕ್’ಶೈರ್ (Warwickshire) ವಿರುದ್ಧ ಪೂಜಾರ ಕೇವಲ 73 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಸಸ್ಸೆಕ್ಸ್ (Sussex) ತಂಡವನ್ನ ಮುನ್ನಡೆಸುತ್ತಿರುವ ಚೇತೇಶ್ವರ್ ಪೂಜಾರ ಬಲಗೈ ಮಧ್ಯಮ ವೇಗದ ಬೌಲರ್ ಲಯರ್ ನಾರ್ವೆಲ್ ಅವರ ಒಂದೇ ಓವರ್’ನಲ್ಲಿ 22 ರನ್ ಸಿಡಿಸಿ ಅಬ್ಬರಿಸಿದ್ದಾರೆ.
ಶತಕದ ಇನ್ನಿಂಗ್ಸ್’ನಲ್ಲಿ ಒಟ್ಟು 79 ಎಸೆತಗಳನ್ನು ಎದುರಿಸಿದ ಪೂಜಾರ 7 ಬೌಂಡರಿಗಳು ಹಾಗೂ 2 ಸಿಕ್ಸರ್’ಗಳ ನೆರವಿಂದ 107 ರನ್ ಗಳಿಸಿದ್ದಾರೆ. ಆದರೆ 311 ರನ್’ಗಳ ಗುರಿ ಬೆನ್ನಟ್ಟಿದ ಸಸ್ಸೆಕ್ಸ್ ತಂಡ ಪೂಜಾರ ಅವರ ಶತಕದ ಹೊರತಾಗಿಯೂ 4 ರನ್’ಗಳಿಂದ ಪಂದ್ಯ ಸೋತಿತು. ವಾರ್ವಿಕ್’ಶೈರ್ ಪರ ಆಡುತ್ತಿರುವ ಭಾರತದ ಮತ್ತೊಬ್ಬ ಆಟಗಾರ ಕೃಣಾಲ್ ಪಾಂಡ್ಯ 3 ವಿಕೆಟ್ ಪಡೆದು ಸಸ್ಸೆಕ್ಸ್ ಸೋಲಿಗೆ ಕಾರಣರಾಗಿದ್ದಾರೆ.
ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವ ಚೇತೇಶ್ವರ್ ಪೂಜಾರ ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿಗೂ ಮುನ್ನ ಸಸ್ಸೆಕ್ಸ್ ಪರ ಕೌಂಟಿ ಡಿವಿಜನ್-2 ಟೂರ್ನಿಯಲ್ಲಿ ರನ್ ಹೊಳೆಯನ್ನೇ ಹರಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಸಸ್ಸೆಕ್ಸ್ ಪರ 8 ಪಂದ್ಯಗಳನ್ನಾಡಿರುವ ಒಟ್ಟು 5 ಶತಕಗಳೊಂದಿಗೆ 109.40 ಸರಾಸರಿಯಲ್ಲಿ 1094 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಭರ್ಜರಿ ದ್ವಿಶತಕಗಳೂ ಸೇರಿವೆ. ಮಿಡ್ಲ್’ಸೆಕ್ಸ್ ವಿರುದ್ಧ 231 ರನ್, ಡುರಾಮ್ ವಿರುದ್ಧ 203 ರನ್ ಮತ್ತು ಡರ್ಬಿಶೈರ್ ವಿರುದ್ಧ ಪೂಜಾರ ಅಜೇಯ 201 ರನ್ ಗಳಿಸಿದ್ದರು. ಪ್ರಸಕ್ತ ಕೌಂಟಿ ಋತುವಿನಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿಯ ದಾಖಲೆ ಪೂಜಾರ ಅವರ ಹೆಸರಲ್ಲಿದೆ.
Let's trend #PujaraforT20WC https://t.co/cjrz7FP9ZH
— Shamak Layeeq (@shamak_layeeq) August 12, 2022
ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಪೂಜಾರ ಬಾರಿಸಿದ ಸಿಡಿಲಬ್ಬರದ ಶತಕವನ್ನು ನೋಡಿದ ಕ್ರಿಕೆಟ್ ಪ್ರಿಯರು ಪೂಜಾರ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.
Cheteshwar Pujara hits 73 ball Century Royal London ODI cup Sussex