Eidgah Maidan Chamrajpet :ವಿವಾದಿತ ಈದ್ಗಾ ಮೈದಾನದಲ್ಲಿ ಕೊನೆಗೂ ತ್ರಿವರ್ಣ ಧ್ವಜದ ಹಾರಾಟ : ಖಾಕಿ ಸರ್ಪಗಾವಲು

ಬೆಂಗಳೂರು : Eidgah Maidan Chamrajpet : ರಾಜ್ಯದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದ್ದ ಚಾಮರಾಜಪೇಟೆಯಈದ್ಗಾ ಮೈದಾನದಲ್ಲಿ ಕೊನೆಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಜಾಗದ ಒಡೆತನದ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದ್ದ ಈ ಪ್ರದೇಶದಲ್ಲಿ ಖಾಕಿ ಕಣ್ಗಾವಲಿನಲ್ಲಿ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಬೆಂಗಳೂರು ನಗರ ಉಪ ವಿಭಾಗಾಧಿಕಾರಿ ಶಿವಣ್ಣ ಧ್ವಜಾರೋಹಣ ಕಾರ್ಯ ನೆರವೇರಿಸಿದರು.


ಮೊದಲೇ ಇದು ವಿವಾದಿತ ಜಾಗವಾಗಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ದುಷ್ಕೃತ್ಯಗಳು ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಶಸ್ತ್ರಸಜ್ಜಿತ ಪೊಲೀಸರು ಹಾಗೂ ಗರುಡಾ ಸಿಬ್ಬಂದಿ ಮೈದಾನದ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ಚಾಮರಾಜಪೇಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಮೀರ್​ ಅಹಮದ್​, ಸಂಸದ ಪಿ.ಸಿ ಮೋಹನ್​, ಹೆಚ್ಚುವರಿ ಪೊಲೀಸ್​ ಕಮಿಷನರ್​ ಸಂದೀಪ್​ ಪಾಟೀಲ್​ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.


ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಜಮೀರ್​ ಅಹಮದ್​, ನಾನು ಎರಡು ತಿಂಗಳ ಹಿಂದೆಯೇ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಬಗ್ಗೆ ಹೇಳಿದ್ದೆ. ಅದರಂತೆಯೇ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿರುವುದು ನಮಗೆ ಖುಷಿ ತಂದಿದೆ. ಸ್ವಾತಂತ್ರ್ಯೋತ್ಸವದ ಜೊತೆಯಲ್ಲಿ ಇನ್ಮುಂದೆ ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವವನ್ನೂ ಆಚರಿಸುತ್ತೇವೆ . ಇದು ಜನರ ಆಸ್ತಿ. ಇಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.


ಸಂಸದ ಪಿ.ಸಿ ಮೋಹನ್​ ಕೂಡ ಇದೇ ವೇಳೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ಬಳಿಕ ಈ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಾಡಿದೆ. ನಮ್ಮ ಈ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಾಡುದಿಲ್ಲವಲ್ಲ ಎಂಬ ಕೊರಗು ನಮಗೂ ಇತ್ತು. ಆದರಿನ್ನು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ . ಗಣೇಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.


ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಸಾಗಿದೆ. ನಾಗರಿಕರ ಒಕ್ಕೂಟ ವಿಐಪಿ ಗೇಟ್​ ಮೂಲಕ ಪ್ರವೆಶಕ್ಕೆ ಮುಂದಾದಾಗ ಪೊಲೀಸರು ಇದನ್ನು ತಡೆದಿದ್ದು ಖಾಕಿ ಹಾಗೂ ನಾಗರಿಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ಉಂಟಾಯ್ತು. ಇಂದು ಇಲ್ಲಿ ಸ್ವಾತಂತ್ರ್ಯೋತ್ಸವ ನಡೆಯಲು ನಾವೇ ಕಾರಣ ಎಂದು ನಾಗರಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್​ ನಿಂಬವರಿ ಸಾರ್ವಜನಿಕರ ಮನವೊಲಿಸಿ ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳ್ಳಿರಿಸಿದರು.

ಇದನ್ನು ಓದಿ : Independence Day Parade 2022 Live : ಭಾರತ 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವ: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ

ಇದನ್ನೂ ಓದಿ : Ross Taylor reveals Shocking Incident: ನ್ಯೂಜಿಲೆಂಡ್ ಕ್ರಿಕೆಟರ್ ರಾಸ್ ಟೇಲರ್ ಕೆನ್ನೆಗೆ ಬಾರಿಸಿದ್ದ ರಾಜಸ್ಥಾನ್ ರಾಯಲ್ಸ್ ಟೀಮ್ ಓನರ್

Indian Flag Finally Hoisted At The Eidgah Maidan Chamrajpet Flag Was Hoisted With Tight Security

Comments are closed.