ಮುಂಬೈ : ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಬಿಸಿಸಿಐ ಬುಧವಾರ ನೇಮಕ ಮಾಡಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ ನಂತರ ರವಿಶಾಸ್ತ್ರಿ ಅವರ ಉತ್ತರಾಧಿಕಾರಿಯನ್ನು ನೇಮಿಸಲು ಮಂಡಳಿಯು ಅಕ್ಟೋಬರ್ 26 ರಂದು ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅದೇ ದಿನ ದ್ರಾವಿಡ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಾಹುಲ್ ದ್ರಾವಿಡ್ ಅವರನ್ನು ಭಾರತದ ಹಿರಿಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ಸ್ವಾಗತಿಸಿದ್ದಾರೆ. ರಾಹುಲ್ ದ್ರಾವಿಡ್ ಅವರು ಪ್ರಖ್ಯಾತ ಆಟಗಾರರಾಗಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ. ರಾಹುಲ್ ದ್ರಾವಿಡ್ ಅವಧಿಯಲ್ಲಿ ಸಾಕಷ್ಟು ಯುವ ಕ್ರಿಕೆಟ್ ಪ್ರತಿಭೆಗಳನ್ನುಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಸಾಧನೆಯನ್ನು ಮಾಡಿದ್ದರು.

ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಶಾ, ರಾಹುಲ್ ದ್ರಾವಿಡ್‌ಗಿಂತ ಉತ್ತಮ ವ್ಯಕ್ತಿ ಇಲ್ಲ ಮತ್ತು ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಗೊಂಡಿರು ವುದನ್ನು ನೋಡಲು ನನಗೆ ಸಂತೋಷವಾಗಿದೆ ಎಂದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೂರದೃಷ್ಟಿತ್ವದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ಸಂಪೂರ್ಣ ಗೌರವವಿದೆ ಎಂದು ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.

ರವಿಶಾಸ್ತ್ರಿ ಅವರ ಅಡಿಯಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ಇದನ್ನು ಮುಂದಕ್ಕೆ ಕೊಂಡೊಯ್ಯಲು ತಂಡದೊಂದಿಗೆ ಕೆಲಸ ಮಾಡಲು ನಾನು ಭಾವಿಸುತ್ತೇನೆ. NCA, U19 ಮತ್ತು ಇಂಡಿಯಾ A ಸೆಟಪ್‌ನಲ್ಲಿ ಹೆಚ್ಚಿನ ಹುಡುಗರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ, ಮುಂದಿನ ಎರಡು ವರ್ಷಗಳಲ್ಲಿ ಕೆಲವು ಮಾರ್ಕ್ಯೂ ಮಲ್ಟಿ-ಟೀಮ್ ಈವೆಂಟ್‌ಗಳಿವೆ ಮತ್ತು ನಮ್ಮ ಸಾಮರ್ಥ್ಯವನ್ನು ಸಾಧಿಸಲು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಮಂಡಳಿಯು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಬಿ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರನ್ನು ಯಶಸ್ವಿ ಅವಧಿಗೆ ಬಿಸಿಸಿಐ ಅಭಿನಂದಿಸಿದೆ. ಭಾರತವು ಟೆಸ್ಟ್ ಮಾದರಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದು, ಇಂಗ್ಲೆಂಡ್‌ನಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದೆ ಎಂದು ಬಿಸಿಸಿಐ ಹೇಳಿದೆ.