ಮುಂಬೈ : ವಿಶ್ವದ ಎರಡನೇ ಬೆಸ್ಟ್ ಸ್ಪಿನ್ನರ್, ಭಾರತದ ನಂ.1 ಹಾಗೂ ವಿಶ್ವದ ನಂ.3 ಆಲ್‌ರೌಂಡರ್. ಫಿಟ್ನೆಸ್, ಫಾರ್ಮ್ ಎಲ್ಲವೂ ಇದೆ. ಆದ್ರೂ ಭಾರತದ ಖ್ಯಾತ ಆಫ್ ಸ್ಪಿನ್ನರ್ ಆರ್. ಅಶ್ವಿನ್‌ಗೆ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಆಡುವ ಬಳಗದಲ್ಲಿ ಚಾನ್ಸ್ ಸಿಕ್ಕಿಲ್ಲ.
ಭಾರತದ ಖ್ಯಾತ ನಾಮರಾದ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ನಂತರ ಟೀಂ ಇಂಡಿಯಾದಲ್ಲಿ ಇಬ್ಬರ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದು ತಮಿಳುನಾಡಿನ ಖ್ಯಾತ ಸ್ಪೀನ್ನರ್ ರವಿಚಂದ್ರನ್ ಅಶ್ವಿನ್. 2006 ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಶ್ವಿನ್ ತಮ್ಮ ಬೌಲಿಂಗ್ ಮೂಲಕ ಮೋಡಿ ಮಾಡಿದ್ದರು. ನಂತರದ ದಿನಗಳಲ್ಲಿ ಆಫ್ ಸ್ಪಿನ್ ಜೊತೆಗೆ ಆಲ್‌ರೌಂಡರ್ ಆಟದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಸದ್ಯ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.2 ಸ್ಪಿನ್ನರ್, ಭಾರತದ ನಂ.1 ಹಾಗೂ ವಿಶ್ವದ ಮೂರನೇ ಆಲ್‌ರೌಂಡರ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಅಶ್ವಿನ್ ನಾಲ್ಕು ವಿಕೆಟ್ ಪಡೆದುಕೊಂಡಿದ್ದರೆ, ಕೌಂಟಿ ಪಂದ್ಯದಲ್ಲಿ 7 ವಿಕೆಟ್ ಪಡೆದು ಮಿಂಚಿದ್ದಾರೆ. ಸದ್ಯ ಅಶ್ವಿನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ, ಅಲ್ಲದೇ ಉತ್ತಮ ಫಿಟ್ನೆಸ್ ಕೂಡ ಕಾಯ್ದುಕೊಂಡಿದ್ದಾರೆ.
ಇದುವರೆಗೆ ಒಟ್ಟು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 79 ಪಂದ್ಯಗಳನ್ನು ಆಡಿರುವ ಅಶ್ವಿನ್ 413 ವಿಕೆಟ್ ಕಬಳಿಸಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ 59 ರನ್ ನೀಡಿ 7 ವಿಕೆಟ್ ಪಡೆದಿರೋದು ಅಶ್ಚಿನ್ ದಾಖಲೆಯಾಗಿದೆ. ಅಲ್ಲದೇ ಬ್ಯಾಟಿಂಗ್ ಆಲ್‌ರೌಂಡರ್ ಆಗಿಯೂ ಸಾಧನೆ ಮಾಡಿದ್ದಾರೆ. 79 ಪಂದ್ಯಗಳ ಮೂಲಕ ಅಶ್ವಿನ್ 5 ಶತಕ, 11 ಅರ್ಧ ಶತಕದ ನೆರವಿನಿಂದ 2685 ರನ್ ಬಾರಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿಯೂ ಅಶ್ವಿನ್ ಉತ್ತಮ ದಾಖಲೆ ನಿರ್ಮಿಸಿದ್ದಾರೆ.
ಇಷ್ಟೆಲ್ಲಾ ದಾಖಲೆಗಳನ್ನು ಹೊಂದಿದ್ದರೂ ರವಿಚಂದ್ರನ್ ಅಶ್ವಿನ್‌ಗೆ ಇಂಗ್ಲೆಂಡ್ ಸರಣಿಯಲ್ಲಿ ಬೇಂಚ್ ಕಾಯುವ ಕಾಯಕ ಮುಂದುವರಿದಿದೆ. ಇಂಗ್ಲೆಂಡ್ ಸರಣಿಯ ಮೂರು ಪಂದ್ಯ ಗಳಲ್ಲಿ ಕೇವಲ 2 ವಿಕೆಟ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಕೇವಲ ಒಂದು ವಿಕೆಟ್ ಪಡೆದು ಕಳಪೆ ಫಾರ್ಮ್ ಮುಂದುವರಿಸಿರುವ ಜಡೇಜಾ ಅವರನ್ನೇ ಅಶ್ವಿನ್ ಸ್ಥಾನದಲ್ಲಿ ಆಡಸಲಾಗುತ್ತಿದೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ನ ಈ ಕ್ರಮಕ್ಕೆ ಕ್ರಿಕೆಟ್ ಪಂಡಿತರು ಅಪಸ್ವರ ಎತ್ತಿದ್ದಾರೆ.
ಇಂಗ್ಲೆಂಡ್‌ನಲ್ಲಿ ಒಟ್ಟು ನಾಲ್ಕು ಮಂದಿ ಎಡಗೈ ಆಟಗಾರರಿದ್ದಾರೆ. ಆದರೂ ಕೂಡ ನಾಯಕ ಕೊಯ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸಲು ಮನಸು ಮಾಡಿಲ್ಲ. ಆಟಗಾರನೊಬ್ಬ ಉತ್ತಮ ಫಾರ್ಮ್‌ನಲ್ಲಿರುವಾಗ ಆಡಿಸದೇ ಬೆಂಚ್ ಕಾಯಿಸೋದು ಎಷ್ಟು ಸರಿ ಅನ್ನೋ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಟೀಂ ಇಂಡಿಯಾ ಅಶ್ವಿನ್ ಅವರಂತಹ ವಿಶ್ವದ ದಿಗ್ಗಜನಿಗೆ ಅವಕಾಶ ನೀಡದಿರುವುದು ದುಂತರವೇ ಸರಿ.
ಇದನ್ನೂ ಓದಿ : ICC TEST RANKINGನಲ್ಲಿ ವಿರಾಟ್‌ಗೆ ನಿರಾಸೆ : ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ
ಇದನ್ನೂ ಓದಿ : Team India : ಶಾರ್ದೂಲ್ ಠಾಕೂರ್, ವಿರಾಟ್ ಕೊಯ್ಲಿ ಆಕರ್ಷಕ ಅರ್ಧ ಶತಕ
(India’s No. 1 and World’s No. 2 Bowler Ashwin has no place Team India England Series)