20 Years for NatWest Final : ದಾದಾ ಶರ್ಟ್ ಬಿಚ್ಚಿ ಅಬ್ಬರಿಸಿದ್ದ ಕ್ಷಣಕ್ಕೆ.., ಭಾರತೀಯ ಕ್ರಿಕೆಟ್’ನ ಮಹೋನ್ನತ ಗೆಲುವಿಗೆ ತುಂಬಿತು 20 ವರ್ಷ

ಲಂಡನ್: ಅದು ಇಡೀ ಭಾರತೀಯ ಕ್ರಿಕೆಟ್”ನ ದಿಕ್ಕನ್ನೇ ಬದಲಿಸಿದ್ದ ಮಹಾನ್ ಗೆಲುವು. ಭಾರತೀಯ ಕ್ರಿಕೆಟ್”ಗೆ ಹೊಸ ಭಾಷ್ಯ ಬರೆದಿದ್ದ, ಹೊಸ ದಿಕ್ಕು ತೋರಿಸಿದ್ದ ಮಹೋನ್ನತ ಗೆಲುವು. ಆ ಗೆಲುವಿಗೆ ಇವತ್ತಿಗೆ ಭರ್ತಿ 20 ವರ್ಷ (20 Years for NatWest Final ) . 2002ರ ಜುಲೈ 13ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್”ನಲ್ಲಿ ನಡೆದಿದ್ದ ರೋಚಕ ನಾಟ್”ವೆಸ್ಟ್ ಟ್ರೋಫಿ ಫೈನಲ್ (NatWest Trophy Final) ಪಂದ್ಯವದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಇಂಗ್ಲೆಂಡ್, ನಿಗದಿತ 50 ಓವರ್”ಗಳಲ್ಲಿ 5 ವಿಕೆಟ್ ನಷ್ಟಕ್ಕೆ 325 ರನ್”ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ (109) ಮತ್ತು ನಾಯಕ ನಾಸೆರ್ ಹುಸೇನ್ (115) ಭರ್ಜರಿ ಶತಕಗಳನ್ನು ಬಾರಿಸಿ ಭಾರತದ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿದ್ದರು.

ಫೈನಲ್ ಗೆಲ್ಲಲು ಇಂಗ್ಲೆಂಡ್ ಒಡ್ಡಿದ 326 ರನ್ ಟಾರ್ಗೆಟ್.. ಆ ಕಾಲಕ್ಕೆ ಅದು ದೊಡ್ಡ ಮೊತ್ತ.. ಆಗ 300+ ಟಾರ್ಗೆಟನ್ನು ಚೇಸ್ ಮಾಡಿ ಗೆಲ್ಲೋದಂದ್ರೆ. ಅದೊಂಥರಾ ಬೆಂಕಿಯ ಮೇಲಿನ ನಡಿಗೆ. ಅವತ್ತು ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ ಬೆಂಕಿಯ ಮೇಲೆ ಹೆಜ್ಜೆ ಹಾಕಿತ್ತು.

146ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು ಭಾರತ:
326 ರನ್ ಗುರಿಯ ಮುಂದೆ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿ ಕೇವಲ 87 ಎಸೆತಗಳಲ್ಲಿ 106 ರನ್’ಗಳ ಜೊತೆಯಾಟವಾಡಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿತ್ತು. ಆದರೆ 43 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 60 ರನ್ ಗಳಿಸಿ ಆಡುತ್ತಿದ್ದ ದಾದಾ ಔಟಾಗಿದ್ದೇ ತಡ… ಇದ್ದಕ್ಕಿದ್ದಂತೆ ಭಾರತ ಇಂಗ್ಲೆಂಡ್ ದಾಳಿಗೆ ತತ್ತರಿಸಿ ಹೋಯ್ತು. 114ರ ಮೊತ್ತದಲ್ಲಿ ವೀರೇಂದ್ರ ಸೆಹ್ವಾಗ್ (45) ಕೂಡ ಔಟ್. ನೋಡ ನೋಡುತ್ತಲೇ ಸಚಿನ್, ದ್ರಾವಿಡ್, ದಿನೇಶ್ ಮೊಂಗಿಯಾ ಪೆವಿಲಿಯನ್ ಸೇರಿಕೊಂಡಾಗಿತ್ತು. 5 ವಿಕೆಟ್”ಗಳು ಪತನಗೊಂಡಾಗ ಭಾರತದ ಮೊತ್ತ ಕೇವಲ 146 ರನ್. ಆಗ ಜೊತೆಯಾದ್ರು ನೋಡಿ ಬಿಸಿರಕ್ತದ ತರುಣರಾದ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್.

ಯುವಿ-ಕೈಫ್ ಜೋಡಿಯ ಅದ್ಭುತ ಜೊತೆಯಾಟ:
ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಕಣ್ಣು ಬಿಡುತ್ತಿದ್ದ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಜೋಡಿ ಕ್ರಿಕೆಟ್ ಕಾಶಿಯಲ್ಲಿ ಆಂಗ್ಲರ ದಾಳಿಗೆ ಸಡ್ಡು ಹೊಡೆದು ನಿಂತಿತು. ಗಂಗೂಲಿ, ಸೆಹ್ವಾಗ್, ಸಚಿನ್, ದ್ರಾವಿಡ್… ಹೀಗೆ ಅತಿರಥ ಮಹಾರಥಿಗಳೆಲ್ಲಾ ಪೆವಿಲಿಯನ್”ನಲ್ಲಿ ತಲೆ ಮೇಲೆ ಕೈ ಹೊತ್ತು ಕೂತಿದ್ರೆ, ಈ ಯುವಕರು ಭಾರತದ ಫೈಟ್’ಬ್ಯಾಕ್”ಗೆ ಟೊಂಕಕಟ್ಟಿ ನಿಂತು ಬಿಟ್ಟರು. 6ನೇ ವಿಕೆಟ್’ಗೆ ಯುವರಾಜ್ ಮತ್ತು ಕೈಫ್ 110 ಎಸೆತಗಳಲ್ಲಿ 121 ರನ್ ಸೇರಿಸಿ ಭಾರತದ ಪ್ರತಿಹೋರಾಟಕ್ಕೆ ಕಾರಣರಾಗಿದ್ದರು. 63 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 69 ರನ್ ಗಳಿಸಿ 267ರ ಮೊತ್ತದಲ್ಲಿ ಔಟಾದಾಗಲೂ ಭಾರತಕ್ಕೆ ಗೆಲುವು ಖಚಿತವಾಗಿರ್ಲಿಲ್ಲ. ಆಗಲೂ ಟೀಮ್ ಇಂಡಿಯಾ ಗೆಲುವಿಗೆ 54 ಎಸೆತಗಳಲ್ಲಿ 59 ರನ್”ಗಳ ಅವಶ್ಯಕತೆಯಿತ್ತು. ಕೈಯಲ್ಲಿದ್ದ ವಿಕೆಟ್ ಕೇವಲ 4.

ಮಹೋನ್ನತ ಇನ್ನಿಂಗ್ಸ್ ಆಡಿದ್ದರು ಕೈಫ್:
54 ಎಸೆತಗಳಲ್ಲಿ 59 ರನ್”ಗಳ ಅವಶ್ಯಕತೆಯಿದ್ದಾಗ ಪಂದ್ಯ ಭಾರತದ ಕೈಯಿಂದ ನಿಧಾನವಾಗಿ ಜಾರಲಾರಂಭಿಸಿತ್ತು. ಆದರೆ ಕ್ರೀಸ್”ನಲ್ಲಿದ್ದ ಮೊಹಮ್ಮದ್ ಕೈಫ್ ಮಾತ್ರ ಪಟ್ಟು ಸಡಿಲಿಸಲಿಲ್ಲ. ಬಾಲಂಗೋಚಿಗಳ ಜೊತೆ ಸೇರಿ ಅತ್ಯಮೂಲ್ಯ ಜೊತೆಯಾಟಗಳನ್ನು ನಿಭಾಯಿಸಿದ ಕೈಫ್, 49.3ನೇ ಓವರ್”ನಲ್ಲಿ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಕ್ರಿಕೆಟ್ ಕಾಶಿಯಲ್ಲಿ ವೃತ್ತಿಜೀವನದ ಸರ್ವಶ್ರೇಷ್ಠ ಹಾಗೂ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಮೊಹಮ್ಮದ್ ಕೈಫ್, 75 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್”ಗಳ ನೆರವಿನಿಂದ ಅಜೇಯ 87 ರನ್ ಬಾರಿಸಿ ತಂಡಕ್ಕೆ 2 ವಿಕೆಟ್”ಗಳ ರೋಚಕ ವಿಜಯ ತಂದುಕೊಟ್ಟಿದ್ದರು.

ಭಾರತ ತಂಡ ಫೈನಲ್ ಪಂದ್ಯ ಗೆಲ್ಲುತ್ತಿದ್ದಂತೆ ಲಾರ್ಡ್ಸ್ ಕ್ರೀಡಾಂಗಣದ ಬಾಲ್ಕನಿಯಲ್ಲಿ ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದು ಭಾರತೀಯ ಕ್ರಿಕೆಟ್’ನ ಐಕಾನಿಕ್ ಕ್ಷಣಗಳಲ್ಲೊಂದು ಎಂದೇ ಖ್ಯಾತಿ ಪಡೆದಿದೆ.

2002ರ ನಾಟ್”ವೆಸ್ಟ್ ಫೈನಲ್ ಪಂದ್ಯದ ಸ್ಕೋರ್ ಕಾರ್ಡ್ ಲಿಂಕ್:

20 Years for NatWest Final

ಇದನ್ನೂ ಓದಿ : Manish Pandey Shreyas Iyer :ಮತ್ತೊಬ್ಬ ಮನೀಶ್ ಪಾಂಡೆ ಆಗಲಿದ್ದಾರಾ ಟೀಮ್ ಇಂಡಿಯಾದ ಈ ಆಟಗಾರ !

ಇದನ್ನೂ ಓದಿ : ಗಂಗೂಲಿ, ಸೆಹ್ವಾಗ್, ಯುವಿಗೊಂದು ನ್ಯಾಯ.. ಕೊಹ್ಲಿಗೊಂದು ನ್ಯಾಯನಾ..? ಗಂಭೀರ ಪ್ರಶ್ನೆ ಎತ್ತಿದ್ದ ಕರ್ನಾಟಕದ ದಿಗ್ಗಜ

cricket 20 Years for NatWest Final

Comments are closed.