ICC Test Rankings KL Rahul : ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 31ನೇ ಸ್ಥಾನಕ್ಕೇರಿದ ಕನ್ನಡಿಗ ಕೆ.ಎಲ್.ರಾಹುಲ್: ಬೂಮ್ರಾ, ಶಮಿಗೂ ಬಡ್ತಿ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC Test Rankings ) ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ (Team India) ಹಂಗಾಮಿ ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ (KL Rahul) 18 ಸ್ಥಾನ ಮೇಲೇರಿದ್ದು, 31ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್ ಗಳಿಸಿದ್ದರು. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಅರ್ಧಶತಕ (50) ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ರಾಹುಲ್ ಹೆಗಲಿಗೆ ಇದೀಗ ನಾಯಕತ್ವದ ಹೊಣೆಗಾರಿಕೆಯೂ ಸೇರಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಅವರು ಬೆನ್ನು ನೋವಿನ ಕಾರಣ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಸದ್ಯ ಸರಣಿಯಲ್ಲಿ ಟೀಂ ಇಂಡಿಯಾ 1–0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಸರಣಿ ಗೆಲುವನ್ನು ಎದುರುನೋಡುತ್ತಿದೆ.

ಮತ್ತೊಂದೆಡೆ, ಟೀಂ ಇಂಡಿಯಾ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್‌ ಶಮಿ ಕ್ರಮವಾಗಿ ‌9 ಮತ್ತು 17ನೇ ಸ್ಥಾನದಲ್ಲಿದ್ದಾರೆ. ಬೂಮ್ರಾ ಈ ಹಿಂದೆ 12ನೇ ಸ್ಥಾನದಲ್ಲಿದ್ದರು. ಶಮಿ 19ನೇ ಸ್ಥಾನದಲ್ಲಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 5 ವಿಕೆಟ್ ಗೊಂಚಲು ಗಳಿಸಿರುವುದು ಶಮಿಗೆ ರ್‍ಯಾಂಕಿಂಗ್‌ನಲ್ಲಿ ಸುಧಾರಣೆಗೆ ನೆರವಾಗಿದೆ.

ಆರಂಭಿಕ ಆಟಗಾರ ಮಯಂಕ್ ಅಗರ್ವಾಲ್ ಒಂದು ಸ್ಥಾನ ಬಡ್ತಿ ಪಡೆದಿದ್ದು, 11ನೇ ಸ್ಥಾನ ಗಳಿಸಿದ್ದಾರೆ. ಅಜಿಂಕ್ಯ ರಹಾನೆ 25ನೇ ಸ್ಥಾನದಲ್ಲಿ ಇದ್ದು, ಅದೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮಾರ್ನಸ್‌ ಲಾಬುಶೇನ್ 912 ಪಾಯಿಂಟ್ಸ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಗ್ರ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಎರಡು ಸ್ಥಾನ ಕುಸಿದು 9ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಕೊಹ್ಲಿ ಸದ್ಯ ಎರಡನೇ ಟೆಸ್ಟ್‌ನಿಂದ ಹೊರಗುಳಿದ್ದು, ಮೂರನೇ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆಡುವ ನಿರೀಕ್ಷೆ ಇದೆ.

ಇದನ್ನೂ ಓದಿ: Tiger Prabhakar : ಜನಮೆಚ್ಚುಗೆ ಗಳಿಸಿದ್ದ ಟೈಗರ್ ಪ್ರಭಾಕರ್ ಹೆಸರಿಗೆ ‘ಟೈಗರ್’ ಸೇರಿಕೊಂಡಿದ್ದು ಹೇಗೆ?

ಇದನ್ನೂ ಓದಿ: Duniya Vijay Telugu Film: ನಾನೇಕೆ ತೆಲುಗಿನಲ್ಲಿ ನಟಿಸುತ್ತಿದ್ದೇನೆ? ದುನಿಯಾ ವಿಜಯ್ ಉತ್ತರ ಓದಿ

(ICC Test Rankings KL Rahul taken 31 place Jasprit Bumrah and Mohammed Shami also gained)

Comments are closed.