India vs Leicestershire warm up match : ಪೂಜಾರ ಕ್ಲೀನ್ ಬೌಲ್ಡ್ ಮಾಡಿದ ಶಮಿ

ಲೀಸೆಸ್ಟರ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಲೀಸೆಸ್ಟರ್’ಶೈರ್ (India vs Leicestershire ) ವಿರುದ್ಧ 4 ದಿನಗಳ ಅಭ್ಯಾಸ (India vs Leicestershire warm up game) ಪಂದ್ಯವಾಡುತ್ತಿದೆ. ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami), ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ.

ಮೊಹಮ್ಮದ್ ಶಮಿ, ಪೂಜಾರರನ್ನು ಕ್ಲೀನ್ ಬೌಲ್ಡ್ ಮಾಡಲು ಹೇಗೆ ಸಾಧ್ಯ? ಯಾಕಂದ್ರೆ ಇಬ್ಬರೂ ಟೀಮ್ ಇಂಡಿಯಾ ಆಟಗಾರರು. ಹೀಗಿರುವಾಗ ಇದು ಸಾಧ್ಯಾನಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡ್ಬಹ್ದು. ಖಂಡಿತಾ ಸಾಧ್ಯ, ಮತ್ತು ಸಾಧ್ಯವಾಗಿದೆ. ಅಭ್ಯಾಸ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಲೀಸೆಸ್ಟರ್’ಶೈರ್ ಪರ ಆಡುತ್ತಿದ್ದಾರೆ. ಪೂಜಾರ ಜೊತೆ ವೇಗಿ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಲೀಸೆಸ್ಟರ್’ಶೈರ್ ಪರ ಕಣಕ್ಕಿಳಿದಿದ್ದಾರೆ. ಟೀಮ್ ಇಂಡಿಯಾ ಬೌಲರ್”ಗಳ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಕೇವಲ 6 ಎಸೆತಗಳನ್ನೆದುರಿಸಿ ಯಾವುದೇ ರನ್ ಗಳಿಸದೆ ಮೊಹಮ್ಮದ್ ಶಮಿ ದಾಳಿಯಲ್ಲಿ ಕ್ಲೀನ್ ಬೌಲ್ಡಾದ್ರು.

ಭಾರತ ತಂಡದ ಇಂಗ್ಲೆಂಡ್”ಗೆ ಕಾಲಿಡುವ ಮೊದ್ಲೇ ಕ್ರಿಕೆಟ್ ಜನಕರ ನಾಡಿನಲ್ಲಿ ಕೌಂಟಿ ಪಂದ್ಯಗಳನ್ನಾಡಿದ್ದ ಪೂಜಾರ, ಟೆಸ್ಟ್ ಸರಣಿಗೆ ಉತ್ತಮ ತಾಲೀಮು ನಡೆಸಿದ್ದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಇತ್ತ ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನಾಡ್ತಾ ಇದ್ರೆ, ಅತ್ತ ಪೂಜಾರ ಇಂಗ್ಲೆಂಡ್’ನಲ್ಲಿ ಸಸ್ಸೆಕ್ಸ್ ಪರ ಕೌಂಟಿ ಕ್ರಿಕೆಟ್ ಆಡ್ತಾ ಇದ್ರು.

ಸಸ್ಸೆಕ್ಸ್ ಪರ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಪೂಜಾರ, ಆಡಿದ 5 ಪಂದ್ಯಗಳ 8 ಇನ್ನಿಂಗ್ಸ್’ಗಳಿಂದ 4 ಶತಕಗಳ ಸಹಿತ 720 ರನ್ ಕಲೆಹಾಕಿದ್ದರು. ಇದರಲ್ಲಿ ಎರಡು ದ್ವಿಶತಕಗಳೂ ಸೇರಿದ್ದವು. ಶ್ರೀಲಂಕಾ ವಿರುದ್ಧ ನಡೆದ ತವರು ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಪೂಜಾರ, ಕೌಂಟಿ ಕ್ರಿಕೆಟ್’ನಲ್ಲಿ ತೋರಿದ ಭರ್ಜರಿ ಪ್ರದರ್ಶನದ ಆಧಾರದಲ್ಲಿ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಆತಿಥೇಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಜುಲೈ 1ರಂದು ಎಡ್ಜ್’ಬಾಸ್ಟನ್ ಮೈದಾನದಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿತ್ತು. ಈಗ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನೆಡಸಲಿದ್ದು, ಭರ್ಜರಿ ಫಾರ್ಮ್’ನಲ್ಲಿರುವ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದುಕೊಡುವ ಒತ್ತಡದಲ್ಲಿದ್ದಾರೆ.

ಇದನ್ನೂ ಓದಿ : Robin Uthappa : 2ನೇ ಮಗುವಿನ ತಂದೆಯಾಗುತ್ತಿದ್ದಾರೆ ಕ್ರಿಕೆಟಿಗ ರಾಬಿನ್ ಉತ್ತಪ್ಪ

ಇದನ್ನೂ ಓದಿ : India tour of England : ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್

India vs Leicestershire warm up match Cheteshwar Pujara clean bowled Mohammed Shami

Comments are closed.