ಮುಂಬೈ: ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲ್ಯಾಂಡ್ (India vs New Zealand) ವಿರುದ್ಧ ಗೆಲುವಿನ ನಗು ಬೀರುವ ಸನ್ನಿವೇಶದಲ್ಲಿದೆ. ಈಮೂಲಕ ಟಿ20 ಸರಣಿಯ ಸೋಲನ್ನು ಮರೆತುಬಿಡುವ ಉಮೇದಿನಲ್ಲಿ ಭಾರತ ತಂಡವಿದೆ. ಮೂರನೇ ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದ ಭಾರತ ತಂಡವು 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, 540 ರನ್‌ಗಳ ಬೃಹತ್ ಗುರಿ ನೀಡಿದೆ.
ಬೃಹತ್ ಮೊತ್ತ ಬೆನ್ನಟ್ಟುತ್ತಿರುವ ಪ್ರವಾಸಿ ತಂಡವು ದಿನದ ಆಟದ ಕೊನೆಯಲ್ಲಿ 5 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದೆ. ಇನ್ನೆರಡು ದಿನಗಳ ಆಟ ಬಾಕಿ ಇದ್ದು ನ್ಯೂಜಿಲೆಂಡ್ ಗೆಲ್ಲಬೇಕಿದ್ದರೆ ಉಳಿದ 5 ವಿಕೆಟ್‌ನಲ್ಲಿ 400 ರನ್ ಗಳಿಸಬೇಕಿದೆ. ಅಥವಾ ಎರಡೂ ದಿನ ಬ್ಯಾಟಿಂಗ್ ಮಾಡಿ ಡ್ರಾ ಮಾಡಿಕೊಳ್ಳಬೇಕಿದೆ. ಇತ್ತ ಟೀಂ ಇಂಡಿಯಾಗೆ ಪಂದ್ಯ ಗೆಲ್ಲಲು ಉಳಿದ 5 ವಿಕೆಟ್ ಕಿತ್ತರೆ ಸಾಕು.
ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್: ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲೂ ಅದೇ ಲಯವನ್ನು ಕಾಪಾಡಿಕೊಂಡಿತ್ತು. ಆರಂಭಿಕ ಆಟಗಾರ ಮಯಂಕ್ ಅಗರ್ವಾಲ್ ಅರ್ಧಶತಕ (62), ಪೂಜಾರ (47), ಶುಭಮನ್ ಗಿಲ್ (47), ಅಕ್ಷರ್ ಪಟೇಲ್ ಔಟಾಗದೆ 41 ರನ್ ನೆರವಿನಿಂದ ನ್ಯೂಜಿಲೆಂಡ್‌ಗೆ ಬೃಹತ್ ಗುರಿ ನೀಡುವುದು ಭಾರತಕ್ಕೆ ಸಾಧ್ಯವಾಯಿತು.
ಮತ್ತೆ ಮುಗ್ಗರಿಸಿದ ನ್ಯೂಜಿಲೆಂಡ್: ಭಾರತವು ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿರುವ ನ್ಯೂಜಿಲೆಂಡ್ ಮತ್ತೆ ಮುಗ್ಗರಿಸಿದೆ. ಡ್ಯಾರಿಲ್ ಮಿಷೆಲ್ ಅರ್ಧಶತಕ (60) ಬಿಟ್ಟರೆ ಹೇಳಿಕೊಳ್ಳುವಂಥ ಬ್ಯಾಟಿಂಗ್ ಯಾವೊಬ್ಬ ಆಟಗಾರನಿಂದಲೂ ಮೂಡಿಬರಲಿಲ್ಲ. ವಿಲ್ ಯಂಗ್ 20 ಹಾಗೂ ಹೆನ್ರಿ ನಿಕೋಲಸ್ ಔಟಾಗದೆ 36 ರನ್ ಗಳಿಸಿರುವುದೇ ಉಳಿದ ಬ್ಯಾಟರ್‌ಗಳ ಪೈಕಿ ಹೆಚ್ಚು ರನ್ ಗಳಿಸಿದ ಸಾಧನೆಯಾಗಿದೆ.
ಮಿಂಚಿದ ಅಶ್ವಿನ್: ಸ್ಪಿನ್ ಮೋಡಿ ಮಾಡಿದ ಆರ್.ಅಶ್ವಿನ್ ಆರಂಭಿಕ ಆಟಗಾರರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ನ್ಯೂಜಿಲೆಂಡ್‌ಗೆ ಪಂದ್ಯದಲ್ಲಿ ಸುಧಾರಿಸುವ ಅವಕಾಶವನ್ನೇ ನೀಡಲಿಲ್ಲ. ಅಶ್ವಿನ್ 3 ವಿಕೆಟ್ ಕಿತ್ತರೆ ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು. ಟಾಮ್ ಬ್ಲಂಡೆಲ್‌ರನ್ನು ಭರತ್ ಮತ್ತು ಸಹಾ ರನೌಟ್ ಬಲೆಗೆ ಕಡವಿದರು. ಸದ್ಯ ಹೆನ್ರಿ ನಿಕೋಲಸ್ (36*) ಮತ್ತು ರಚಿನ್ ರವೀಂದ್ರ (2*) ಕ್ರೀಸ್‌ನಲ್ಲಿದ್ದಾರೆ.
ಇದನ್ನೂ ಓದಿ: TCL : ಡಿಸೆಂಬರ್‌ನಲ್ಲಿ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ
ಇದನ್ನೂ ಓದಿ : AB De Villiers : RCB ತಂಡಕ್ಕೆ ಮರಳಿದ್ದಾರೆ ಎಬಿ ಡಿವಿಲಿಯರ್ಸ್
(India vs New Zealand 2nd test match 3rd day india have a chance to win)