ಕೋಲ್ಕತಾ: ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಟೂರ್ನಿಯಲ್ಲಿ ಸತತ 2ನೇ ಗೆಲುವು (Karnataka beat Vidarbha) ದಾಖಲಿಸಿದೆ. ಕಲ್ಕತ್ತಾ ಕ್ರಿಕೆಟ್ & ಪುಟ್ಬಾಲ್ ಗ್ರೌಂಡ್’ನಲ್ಲಿ ಭಾನುವಾರ ನಡೆದ ಎಲೈಟ್ ಗ್ರೂಪ್ ‘ಬಿ’ ಹಂತದ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ವಿರುದ್ಧ 66 ರನ್’ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 50 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 314 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ರಾಜ್ಯ ತಂಡದ ಪರ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಯುವ ಬಲಗೈ ಬ್ಯಾಟರ್ ನಿಕಿನ್ ಜೋಸ್ 121 ಎಸೆತಗಳಲ್ಲಿ 96 ರನ್ ಗಳಿಸಿದರು. ನಾಯಕ ಮಯಾಂಕ್ (9) ಮತ್ತು ಉಪನಾಯಕ ಆರ್.ಸಮರ್ಥ್ (19) ಆರಂಭದಲ್ಲೇ ಔಟಾದ ನಂತರ ಜವಾಬ್ದಾರಿಯುತ ಆಟವಾಡಿದ ನಿಕಿನ್ ಜೋಸ್ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಮಾಜಿ ನಾಯಕ ಮನೀಶ್ ಪಾಂಡ 44 ರನ್, ಆಲ್ರೌಂಡರ್ ಶ್ರೇಯಸ್ ಗೋಪಾಲ್ 43 ಎಸೆತಗಳಲ್ಲಿ 56 ರನ್ ಸಿಡಿಸಿದರು.ಸ್ಲಾಗ್ ಓವರ್’ಗಳಲ್ಲಿ ಅಬ್ಬರಿಸಿದ ಮತ್ತೊಬ್ಬ ಆಲ್ರೌಂಡರ್ ಕೃಷ್ಣಪ್ಪ ಗೌತಮ್ 18 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿದರೆ, ಮನೋಜ್ ಭಾಂಡಗೆ 17 ಎಸೆತಗಳಲ್ಲಿ 23 ರನ್ ಗಳಿಸಿದರು.
ನಂತರ ಕಠಿಣ ಗುರಿ ಬೆನ್ನಟ್ಟಿದ ವಿದರ್ಭ ತಂಡ ಕರ್ನಾಟಕ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ ನಿಗದಿತ 50 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ವಿದರ್ಭ ಪರ ಅಕ್ಷಯ್ ಕರ್ನೇವರ್ ಏಕಾಂಗಿ ಹೋರಾಟ ನಡೆಸಿ ಅಜೇಯ ಶತಕ (104*) ರನ್ ಬಾರಿಸಿದರೆ, ಕರ್ನಾಟಕ ಪರ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಬಲಗೈ ಮಧ್ಯಮ ವೇಗಿ ವಿ.ಕೌಶಿಕ್ 27 ರನ್ನಿಗೆ 4 ವಿಕೆಟ್ ಕಬಳಿಸಿದರು. ಮತ್ತೊಬ್ಬ ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ 40 ರನ್ನಿಗೆ 3 ವಿಕೆಟ್ ಪಡೆದರು.
ಮೊದಲ ಪಂದ್ಯದಲ್ಲಿ ಮೇಘಾಲಯ ವಿರುದ್ಧ 115 ರನ್’ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದ್ದ ಕರ್ನಾಟಕ, ಇದೀಗ ವಿದರ್ಭ ವಿರುದ್ಧದ ಗೆಲುವಿನೊಂದಿಗೆ ಎಲೈಟ್ ಗ್ರೂಪ್ ‘ಬಿ’ನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಮಂಗಳವಾರ (ನವೆಂಬರ್ 15) ನಡೆಯುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಬಳಗ, ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ : 2ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ
Karnataka beat Vidarbha Vijay Hazare Trophy in Mayank Agarwal Captainship