ಮೆಲ್ಬೋರ್ನ್: ನಾಳೆ (ನವೆಂಬರ್ 5) ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿಯವರ (Virat Kohli birthday) ಜನ್ಮದಿನ. ಕಿಂಗ್ ಕೊಹ್ಲಿ ಶನಿವಾರ 34ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ (T20 World Cup 2022) ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರು ಕೊಹ್ಲಿ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗುತ್ತಿದ್ದಾರೆ.
ಇದರ ಮಧ್ಯೆ ಪಾಕಿಸ್ತಾನದ ವೇಗದ ಬೌಲರ್ ಶಹನವಾಜ್ ದಹಾನಿ (Shahnawaz Dahani) ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯವರಿಗೆ ಒಂದು ದಿನ ಮೊದಲೇ ಜನ್ಮದಿನದ ಶುಭಾಶಯ ಕೋರಿದ್ದಾರೆ. “ಕ್ರಿಕೆಟ್ ಅನ್ನು ಅತ್ಯಂತ ಸುಂದರವಾಗಿಸಿದ ಕಲಾವಿದನ ಹುಟ್ಟುಹಬ್ಬಕ್ಕೆ ಶುಭ ಕೋರಲು ನವೆಂಬರ್ 5ರವರೆಗೆ ಕಾಯಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ, ಗ್ರೆಟೆಸ್ಟ್ ಆಫ್ ಆಲ್ ಟೈಮ್, ನಿಮಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದಿನವನ್ನು ಆನಂದಿಸಿ ಮತ್ತು ಜಗತ್ತಿಗೆ ಮನರಂಜನೆ ನೀಡುತ್ತಿರಿ ಸಹೋದರ” ಎಂದು ಶಹನವಾಜ್ ದಹಾನಿ ಟ್ವೀಟ್ ಮಾಡಿದ್ದಾರೆ.
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ಸದ್ಯ ಕಾಂಗರೂನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿದ್ದಾರೆ. ಆಡಿರುವ 4 ಪಂದ್ಯಗಳಲ್ಲಿ ಮೂರು ಅಜೇಯ ಅರ್ಧಶತಕಗಳನ್ನು ಬಾರಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಸೂಪರ್-12 ಪಂದ್ಯದಲ್ಲಿ ಅಜೇಯ 82 ರನ್, ನೆದರ್ಲೆಂಡ್ಸ್ ವಿರುದ್ಧ ಅಜೇಯ 62 ರನ್ ಮತ್ತು ಬಾಂಗ್ಲಾದೇಶ ವಿರುದ್ಧ ಅಜೇಯ 64 ರನ್ ಬಾರಿಸಿದ್ದ ಕೊಹ್ಲಿ, ವಿಫಲರಾಗಿರುವುದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾತ್ರ (12 ರನ್). ಈ ನಾಲ್ಕು ಪಂದ್ಯಗಳ ಪೈಕಿ ಪಾಕಿಸ್ತಾನ ವಿರುದ್ಧ ಕೊಹ್ಲಿ ವೃತ್ತಿಜೀವನದಲ್ಲೇ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದರು.
160 ರನ್’ಗಳ ಟಾರ್ಗೆಟ್ ಬೆನ್ನತ್ತುತ್ತಿದ್ದ ವೇಳೆ 10 ಓವರ್’ಗಳಲ್ಲಿ 45 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ತಮ್ಮ ಅಮೋಘ ಆಟದಿಂದ ಕೊಹ್ಲಿ ಗೆಲ್ಲಿಸಿದ್ದರು. ಟಿ20 ವಿಶ್ವಕಪ್-2022 ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಿಂದ 220ರ ಸರಾಸರಿಯಲ್ಲಿ 220 ರನ್ ಕಲೆ ಹಾಕಿರುವ ವಿರಾಟ್ ಕೊಹ್ಲಿ, ಭಾನುವಾರ ಮೆಲ್ಬೋರ್ನ್’ನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲೂ ಅಬ್ಬರಿಸುವ ತವಕದಲ್ಲಿದ್ದಾರೆ.
ಇದನ್ನೂ ಓದಿ : New Cricket Stadiums Karnataka : ಪುತ್ತೂರು, ಬಳ್ಳಾರಿಯಲ್ಲಿ ನಿರ್ಮಾಣವಾಗಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
Pak fast bowler’ Shahnawaz Dahani advance wish to Virat Kohli birthday