Vyshak Vijaykumar : ಡ್ರೀಮ್ ಡೆಬ್ಯೂ ಮಾಡಿದ RCB ಸ್ಟಾರ್ ವೈಶಾಖ್’ಗೆ ಸಿಕ್ತು ಅಮ್ಮನ ಸಿಹಿ ಮುತ್ತು

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪದಾರ್ಪಣೆ ಮಾಡಿ (Royal Challengers Bangalore) ಆಡಿದ ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು ತಂದು ಕೊಟ್ಟ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ (Vyshak Vijaykumar) ಕನ್ನಡಿಗರ ಮನ ಗೆದ್ದಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ 2ನೇ ಜಯ ಸಂಪಾದಿಸಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕಾರಣವಾಗಿದ್ದು ಕರ್ನಾಟಕ ಯುವ ಬಲಗೈ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್ (Vyshak Vijaykumar). ಐಪಿಎಲ್’ಗೆ ಪದಾರ್ಪಣೆ ಮಾಡಿದ ವೈಶಾಖ್ 4 ಓವರ್’ಗಳಲ್ಲಿ 20 ರನ್ನಿತ್ತು 3 ವಿಕೆಟ್ ಪಡೆದರು. ತಮ್ಮ ಮೊದಲ ಓವರ್’ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಡೇವಿಡ್ ವಾರ್ನರ್ ವಿಕೆಟ್ ಪಡೆದ ವೈಶಾಖ್, ನಂತರ ಅಪಾಯಕಾರಿ ದಾಂಡಿಗ ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ವಿಕೆಟ್ ಕಬಳಿಸಿದರು. ತಮ್ಮ ಈ ಮ್ಯಾಚ್ ವಿನ್ನಿಂಗ್ ಸಾಧನೆಗಾಗಿ ವೈಶಾಖ್ ವಿಜಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿದ್ರೆ, ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ 151 ರನ್ ಗಳಿಸಲಷ್ಟ ಶಕ್ತವಾಗಿ ಸತತ 5ನೇ ಸೋಲು ಕಂಡಿತ್ತು. ಪಂದ್ಯದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಆರ್’ಸಿಬಿ ತಂಡದ ಬಸ್ ಏರುವ ಸಂದರ್ಭದಲ್ಲಿ ವೈಶಾಖ್ ವಿಜಯ್ ಕುಮಾರ್ ತಾಯಿ ಮತ್ತು ತಂದೆಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಗನಿಗೆ ತಾಯಿ ಸಿಹಿ ಮುತ್ತು ನೀಡಿ ಸಂಭ್ರಮಿಸಿದ್ದಾರೆ.

ಸ್ವಿಂಗ್ ಬೌಲಿಂಗ್’ಗೆ ಹೆಸರುವಾಸಿಯಾಗಿರುವ 26 ವರ್ಷದ ವೈಶಾಖ್ ಕರ್ನಾಟಕ ತಂಡದ ಯುವ ವೇಗದ ಬೌಲರ್. ಆರ್.ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್ ನಿವೃತ್ತಿಯ ನಂತರ ಕರ್ನಾಟಕ ತಂಡದ ಬೌಲಿಂಗ್ ಪಡೆಗೆ ಬಲ ತುಂಬಿರುವ ಬೌಲರ್. ಕರ್ನಾಟಕ ಪರ ಈಗಾಗಲೇ 10 ರಣಜಿ ಪಂದ್ಯಗಳನ್ನಾಡಿರುವ ವೈಶಾಖ್ ವಿಜಯ್ ಕುಮಾರ್ 38 ವಿಕೆಟ್’ಗಳನ್ನು ಪಡೆದಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಿಂದ 11 ವಿಕೆಟ್ ಹಾಗೂ 14 ಟಿ20 ಪಂದ್ಯಗಳಿಂದ 22 ವಿಕೆಟ್ ಪಡೆದು ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ : ಐಪಿಎಲ್ ಚೊಚ್ಚಲ ಪಂದ್ಯಕ್ಕೂ ಮುನ್ನ ಅರ್ಜುನ್ ತೆಂಡೂಲ್ಕರ್‌ನ್ನು ರೋಹಿತ್ ಶರ್ಮಾ ಅಪ್ಪಿಕೊಂಡ ವಿಡಿಯೋ ವೈರಲ್

ಇದನ್ನೂ ಓದಿ : Vyshak Vijaykumar : ಆರ್‌ಸಿಬಿ ಪರ ಪಾದಾರ್ಪಣೆಯ ಪಂದ್ಯದಲ್ಲಿ ಕನ್ನಡಿಗನ ಬೆಂಕಿ ಬೌಲಿಂಗ್, ಯಾರು ಈ ವೈಶಾಖ್..?

ಆರ್’ಸಿಬಿ ಬ್ಯಾಟ್ಸ್’ಮನ್ ರಜತ್ ಪಾಟಿದಾರ್ ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದ ಕಾರಣ ಅವರಿಗೆ ಬದಲಿ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡಿದ್ದ ವೈಶಾಖ್, ಆಡಿದ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

Vyshak Vijaykumar : RCB star Vyshak who made his dream debut gets a sweet kiss from his mother

Comments are closed.