ಢಾಕಾ: ಮಹಿಳಾ (Women’s Asia Cup 2022)ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 13 ರನ್’ಗಳ ಆಘಾತಕಾರಿ ಸೋಲು ಕಂಡಿದೆ.ಬಾಂಗ್ಲಾದೇಶದ ಸಿಲ್ಹೆಟ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿದಾದರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಕಲೆ ಹಾಕಿತು. 5 ಬೌಂಡರಿ ಮತ್ತು 1 ಸಿಕ್ಸರ್’ನೊಂದಿಗೆ ಅಬ್ಬರಿಸಿದ ನಿದಾ ದರ್ 37 ಎಸೆತಗಳಲ್ಲಿ ಅಜೇಯ 56 ರನ್ ಸಿಡಿಸಿದರು.
(Women’s Asia Cup 2022)ಸುಲಭ ಗುರಿ ಬೆನ್ನಟ್ಟಿದ ಹರ್ಮನ್’ಪ್ರೀತ್ ಕೌರ್ ನಾಯಕತ್ವದ ಭಾರತ ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತು ಸೋಲು ಕಾಣುವಂತಾಯಿತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಕೇವಲ 17 ರನ್ ಗಳಿಸಿ ಔಟಾಗಿದ್ದು, ಬ್ಯಾಟಿಂಗ್ ಲೈನಪ್’ನಲ್ಲಿ ಮಾಡಿದ ಬದಲಾವಣೆ, ನಾಯಕಿ ಹರ್ಮನ್’ಪ್ರೀತ್ ಕೌರ್ 7ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದದ್ದು.. ಈ ಎಲ್ಲಾ ಕಾರಣಗಳಿಂದ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನಪ್ ಕುಸಿದ ಪರಿಣಾಮ 19.4 ಓವರ್’ಗಳಲ್ಲಿ 124 ರನ್ನಿಗೆ ಆಲೌಟಾಗಿ ಪಾಕಿಸ್ತಾನಕ್ಕೆ ಶರಣಾಗುವಂತಾಯಿತು.
ಬ್ಯಾಟಿಂಗ್’ನಲ್ಲಿ ಮಿಂಚಿದ್ದ ನಿದಾದರ್ ಬೌಲಿಂಗ್’ನಲ್ಲೂ ಮಿಂಚಿ 23 ರನ್ನಿಗೆ ಎರಡು ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಭಾರತ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ವನಿತೆಯರಿಗೆ ಪಾಕಿಸ್ತಾನ ದಿಗ್ಗಜ ವೇಗದ ಬೌಲರ್ ವಸೀಮ್ ಅಕ್ರಮ್ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಇದು ಪ್ರಸಕ್ತ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಎದುರಾದ ಮೊದಲ ಸೋಲು. ಈ ಹಿಂದಿನ ಪಂದ್ಯಗಳಲ್ಲಿ ಹರ್ಮನ್’ಪ್ರೀತ್ ಬಳಗ ಶ್ರೀಲಂಕಾ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳ ವಿರುದ್ಧ ಸುಲಭ ಗೆಲುವು ದಾಖಲಿಸಿತ್ತು. ಸದ್ಯ ಆಡಿರುವ ನಾಲ್ಕು ಪಂದ್ಯಗಳಿಂದ 3 ಗೆಲುವು, ಒಂದು ಸೋಲಿನೊಂದಿಗೆ ಭಾರತ 6 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 4 ಪಂದ್ಯಗಳಿಂದ 6 ಅಂಕಗಳನ್ನು ಗಳಿಸಿರುವ ಪಾಕಿಸ್ತಾನ 2ನೇ ಸ್ಥಾನದಲ್ಲಿದೆ.
ಇದನ್ನೂ ಓದಿ : Virat Kohli: ರೋಹಿತ್ ಶರ್ಮಾ ಪತ್ನಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ವಿರಾಟ್ ಕೊಹ್ಲಿ
ಶನಿವಾರ ನಡೆಯುವ ತನ್ನ 5ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ, ಆತಿಥೇಯ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಸೋಮವಾರ ನಡೆಯುವ ಅಂತಿಮ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿ ಥಾಯ್ಲೆಂಡ್. ಲೀಗ್ ಹಂತದಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್’ಗೆ ಎಂಟ್ರಿ ಕೊಡಲಿವೆ.
Women’s Asia Cup T20 India women suffered a shock defeat against Pakistan