ಬೆಂಗಳೂರು: ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಟೀಮ್ ಇಂಡಿಯಾ ಕಂಬ್ಯಾಕ್ ಹಾದಿಯಲ್ಲಿದ್ದಾರೆ. ತೊಡೆಯ ಸ್ನಾಯು ಸೆಳೆತಕ್ಕೆ ಶಸ್ತ್ರಚಿಕಿತ್ಸೆಗೊಳಗಾದ ನಂತರ ಇದೀಗ ಚೇತರಿಸಿಕೊಳ್ಳುತ್ತಿರುವ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದೊಂದು ತಿಂಗಳಿಂದ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಟೀಮ್ ಇಂಡಿಯಾದಿಂದ ರಾಹುಲ್ ಅವರಿಗೆ ಸುದೀರ್ಘ ಬ್ರೇಕ್ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಡುವಿನ ವೇಳೆಯನ್ನು ರಾಹುಲ್ ತಮ್ಮ ಸ್ನೇಹಿತರೊಂದಿಗೆ ಕಳೆಯುತ್ತಿದ್ದಾರೆ. ಕಳೆದ ಭಾನುವಾರವಷ್ಟೇ ರಾಹುಲ್ ತಮ್ಮ ಗೆಳೆಯರೊಂದಿಗೆ ಬನ್ನೇರುಘಟ್ಟ ಬಳಿಯಿರುವ Area83 resortಗೆ ಭೇಟಿ ನೀಡಿದ್ದರು. ಅಲ್ಲಿ ರಾಹುಲ್ ಮತ್ತು ಸ್ನೇಹಿತರು, ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. ಗನ್ ಶೂಟಿಂಗ್, ಬೋಟಿಂಗ್, ಗೋ-ಕಾರ್ಟಿಂಗ್ ಮತ್ತು ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದರು. ಆ ವೀಡಿಯೊವನ್ನು ರಾಹುಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ರಾಹುಲ್ ಜೊತೆ ಅವರ ಸ್ನೇಹಿತರಾದ ಕ್ರಿಕೆಟಿಗ ರೋನಿತ್ ಮೋರೆ, ಡೇವಿಡ್ ಮಥಾಯಸ್ ಮತ್ತು ಸಿನಾನ್ ಅಬ್ದುಲ್ ಖಾದರ್ ರೆಸಾರ್ಟ್’ಗೆ ತೆರಳಿದ್ದರು.
ಟೀಮ್ ಇಂಡಿಯಾ ಏಕದಿನ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ಥಂಭವಾಗಿರುವ ಕೆ.ಎಲ್ ರಾಹುಲ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಲಭ್ಯರಾಗುವ ಸಾಧ್ಯತೆಯಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಭಾರತದ ಆತಿಥ್ಯದಲ್ಲೇ ನಡೆಯಲಿದ್ದು, ವಿಶ್ವಕಪ್ ತಂಡದಲ್ಲಿ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
31 ವರ್ಷದ ಕೆ.ಎಲ್ ರಾಹುಲ್ ಕಳೆದ ಐಪಿಎಲ್ ಟೂರ್ನಿಯ ವೇಳೆ ಬಲತೊಡೆಯ ಸ್ನಾಯು ಸೆಳೆತಕ್ಕೊಳಗಾಗಿ ಐಪಿಎಲ್ ಟೂರ್ನಿಯಿಂದ ಅರ್ಧದಲ್ಲೇ ಹೊರ ಬಿದ್ದಿದ್ದರು. ನಂತರ ಲಂಡನ್’ನಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಹೀಗಾಗಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final – WTC) ಪಂದ್ಯಕ್ಕೆ ರಾಹುಲ್ ಅಲಭ್ಯರಾಗಿದ್ದರು.
ಇದನ್ನೂ ಓದಿ : Dwayne Bravo Junior : ಟ್ರಿನಿಡಾಡ್‌ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಎದುರಾದ ಅಪರೂಪದ ಅತಿಥಿ, ಕ್ಯೂಟ್ ವೀಡಿಯೊ ವೈರಲ್!
ವೆಸ್ಟ್ ಇಂಡೀಸ್ ಪ್ರವಾಸವನ್ನೂ ತಪ್ಪಿಸಿಕೊಂಡಿರುವ ರಾಹುಲ್ ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಗುರಿ ಹೊಂದಿದ್ದಾರೆ. ಏಷ್ಯಾ ಕಪ್ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಏಷ್ಯಾ ಕಪ್ ಬೆನ್ನಲ್ಲೇ ಭಾರತ ತಂಡ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದು, ಟೀಮ್ ಇಂಡಿಯಾ ಯಶಸ್ಸಿನಲ್ಲಿ ಕೆ.ಎಲ್ ರಾಹುಲ್ ಅವರ ಪಾತ್ರ ವಿಶ್ವಕಪ್’ನಲ್ಲಿ ಮಹತ್ವದ್ದಾಗಲಿದೆ.
Exclusive: KL Rahul : Gun in the hand holding the bat, KL Rahul appeared in a new avatar