ಸೌಂಥಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಭಾರತದ ವಿರುದ್ದ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ನ್ಯೂಜಿಲೆಂಡ್ ತಂಡ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಟೀಂ ಇಂಡಿಯಾ ಆಟಗಾರರು ಆರಂಭದಿಂದಲೂ ಕೆಟ್ಟ ಆಟವನ್ನು ಪ್ರದರ್ಶಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ನ್ಯೂಜಿಲೆಂಡ್ ತಂಡಕ್ಕೆ ವರದಾನ ವಾಗಿತ್ತು. ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು.

ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಕೊನೆಗೂ ನನಸಾಗಿಸಿಕೊಂಡಿದೆ. ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮುರಿಯದ ಮೂರನೇ ವಿಕೆಟಿಗೆ 173 ಎಸೆತಗಳಲ್ಲಿ 96 ರನ್ ಜೊತೆಯಾಟ ವಾಡಿ ಗೆಲುವು ತಂದುಕೊಟ್ಟರು. ಕೇನ್ ವಿಲಿಯಮ್ಸನ್ 52 ರನ್(89 ಎಸೆತ, 8 ಬೌಂಡರಿ), ರಾಸ್ ಟೇಲರ್ 47 ರನ್(100 ಎಸೆತ, 6 ಬೌಂಡರಿ) ಹೊಡೆದರು. ಭಾರತದ ಪರ ಸ್ಪಿನ್ನರ್ ಅಶ್ವಿನ್ 2 ವಿಕೆಟ್ ಪಡೆದಿರೋದನ್ನು ಬಿಟ್ರೆ ಉಳಿದ ಬೌಲರ್ ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

5ನೇ ದಿನ 2 ವಿಕೆಟ್ ನಷ್ಟಕ್ಕೆ 62 ರನ್‍ಗಳಿಸಿದ್ದ ಭಾರತ ಇಂದು 8 ವಿಕೆಟ್ ಗಳ ಸಹಾಯದಿಂದ 92 ರನ್‍ಗಳಿಸಿ ಅಂತಿಮವಾಗಿ 73 ಓವರ್‍ಗಳಲ್ಲಿ 170 ರನ್‍ಗಳಿಗೆ ಆಲೌಟ್ ಆಯ್ತು. ಭಾರತದ ಪರ ರಿಷಭ್ ಪಂತ್ 41 ರನ್(88 ಎಸೆತ, 4 ಬೌಂಡರಿ), ರವೀಂದ್ರ ಜಡೇಜಾ 16 ರನ್, ಅಜಿಂಕ್ಯಾ ರಹಾನೆ 15 ರನ್, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ 13 ರನ್ ಹೊಡೆದು ಔಟಾದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 4 ವಿಕೆಟ್ ಪಡೆದರೆ, ಟ್ರೆಂಡ್ ಬೌಲ್ಟ್ 3, ಕೈಲ್ ಜೇಮಿಸನ್ 2, ನೆಲಿ ವ್ಯಾಗ್ನರ್ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 217/10 ಮತ್ತು 170/10
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 249/10 ಮತ್ತು 140/2