Gautham Gambhir : ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡ ಕ್ಷಣದಿಂದಲೂ ತುಂಬಾ ಮಂದಿಯನ್ನು ಕಾಡುತ್ತಿರುವ ಕುತೂಹಲ, ‘’ಈತ ವಿರಾಟ್ ಕೊಹ್ಲಿ ಜೊತೆ ಹೇಗೆ ಕೆಲಸ ಮಾಡುತ್ತಾನೆ’’ ಎಂಬುದು. ಒಬ್ಬ ಆಟಗಾರನೊಂದಿಗೆ ಕೈ ಕೈ ಮಿಲಾಯಿಸುವ ರೀತಿಯಲ್ಲಿ ಮೈದಾನದಲ್ಲೇ ಕಿತ್ತಾಡಿದವನು. ಅದೇ ಆಟಗಾರನ ಮೇಲೆ ಶರಂಪರ ಟೀಕಾ ಪ್ರಹಾರಗಳನ್ನು ನಡೆಸುತ್ತಾ ಬಂದವನು. ಕ್ರಿಕೆಟ್ ವಿಶ್ಲೇಷಕನ ಜಾಗದಲ್ಲಿ ಕೂತಿದ್ದಾಗ ಭಾರತ ತಂಡದ ಆಟಗಾರರನ್ನು ಹಿಗ್ಗಾಮುಗ್ಗ ಟೀಕಿಸಿದವನು. ಈಗ ಅದೇ ಭಾರತ ತಂಡಕ್ಕೆ ‘ದ್ರೋಣ’ನಾಗಿ ಬಂದಿದ್ದಾನೆ ಗೌತಮ್ ಗಂಭೀರ್.

ಅನುಮಾನವೇ ಬೇಡ.. ಗೌತಮ್ ಗಂಭೀರ್ ಒಬ್ಬ ಒಳ್ಳೆಯ ಕ್ರಿಕೆಟಿಗ. ಎರಡು ವಿಶ್ವಕಪ್ ಫೈನಲ್’ಗಳಲ್ಲಿ ಕೆಚ್ಚೆದೆಯ ಇನ್ನಿಂಗ್ಸ್ ಕಟ್ಟಿ ಭಾರತ ವಿಶ್ವಕಪ್ ಗೆಲ್ಲಲು ಕಾರಣನಾದವನು. ಆಡಿದ ಆಟದ ಬಗ್ಗೆ ಎರಡು ಮಾತೇ ಇಲ್ಲ. ಆದರೆ ಅಷ್ಟೇ ಅಹಂ ಇರುವ ಮನುಷ್ಯ. ಗೌತಮ್ ಗಂಭೀರ್ ಮೊದಲಿನಿಂದಲೂ ವಿರಾಟ್ ಕೊಹ್ಲಿಯ ಕಡು ವಿರೋಧಿ. ಕೊಹ್ಲಿ ಚೆನ್ನಾಗಿ ಆಡಿದಾಗಲೆಲ್ಲಾ, ಜಗತ್ತಿನ ಕಣ್ಣಿಗೆ ಕಾಣದ ‘ಕೊಂಕು’ ನುಡಿದವನು.ಇಡೀ ಜಗತ್ತೇ ಕೊಹ್ಲಿಯ ವಿರಾಟ ಆಟಕ್ಕೆ ‘ಭೇಷ್’ ಎಂದಾಗ ಮೊಸರಲ್ಲಿ ಕಲ್ಲು ಹುಡುಕಿದವನು.
ಕಳೆದ ನಾಲ್ಕೈದು ವರ್ಷಗಳಲ್ಲಿ ‘ಕೊಹ್ಲಿ ಫೋಬಿಯಾ’ ಅಂಟಿಸಿಕೊಂಡು ತನ್ನದೇ ನಾಡಿನ ಆಟಗಾರನ ಜನ್ಮದ್ವೇಷಿಯಂತೆ ಕಂಡವನು, ಆ ರೀತಿ ನಡೆದು ಕೊಂಡವನು ಗೌತಮ್ ಗಂಭೀರ್. ಅತ್ತ ವಿರಾಟ್ ಕೊಹ್ಲಿಯೂ ಅಷ್ಟೇ.. ಗಂಭೀರ್ ವಿರುದ್ಧ ಒಂದು ಸಣ್ಣ ಕಿಡಿ ಹೊತ್ತಿಕೊಂಡರೂ ಸಾಕು, ಜ್ವಾಲೆಯಂತೆ ಧಗಧಗಿಸಿದವನು. ಅದೇ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್’ನ ದೊಡ್ಡ ಸ್ಟಾರ್ ಆಗಿದ್ದಕ್ಕೋ ಅಥವಾ ಆ stardom ತನಗೆ ಸಿಗಲಿಲ್ಲ ಎಂಬ ಕಾರಣಕ್ಕೋ ಗೊತ್ತಿಲ್ಲ.. ‘’ನಾನು ಈ stardomನ ವಿರೋಧಿ’’ ಎನ್ನುತ್ತಲೇ ಭಾರತ ತಂಡಕ್ಕೆ ಕೋಚ್ ಆಗಿ ಬಂದಿದ್ದಾನೆ ಗೌತಮ್ ಗಂಭೀರ್.
ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?
ಈ ಕ್ರಿಕೆಟ್ stardom ಬಗ್ಗೆ ಗಂಭೀರ್ ಏನೇ ಹೇಳಲಿ.. ಅದಿಲ್ಲದೆ ಭಾರತೀಯ ಕ್ರಿಕೆಟ್ ಇಲ್ಲವೇ ಇಲ್ಲ.. ಸುನಿಲ್ ಗವಾಸ್ಕರ್, ಕಪಿಲ್ ದೇವ್ ಕಾಲದಿಂದ ಹಿಡಿದು ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ವಿರಾಟ್ ಕೊಹ್ಲಿವರೆಗೆ… ಕಾಲ ಕಾಲಕ್ಕೆ ಒಬ್ಬೊಬ್ಬ ದೊಡ್ಡ ಸ್ಟಾರ್ ಭಾರತೀಯ ಕ್ರಿಕೆಟ್’ನಲ್ಲಿ ಹುಟ್ಟುತ್ತಲೇ ಬಂದಿದ್ದಾರೆ. ಕ್ರಿಕೆಟ್’ನಿಂದ ಅವರೂ ಬೆಳೆದಿದ್ದಾರೆ, ಅವರಿಂದ ಕ್ರಿಕೆಟ್ ಕೂಡ ಬೆಳೆದಿದೆ. ಮುಂದೆಯೂ ಅದು ಮತ್ತೊಬ್ಬ star ರೂಪದಲ್ಲಿ ಇದ್ದೇ ಇರುತ್ತದೆ. ಕಾರಣ, ಭಾರತದ ಕ್ರಿಕೆಟ್ ಬೆಳೆದು ಬಂದಿರುವುದೇ ಹಾಗೆ.
ಇದನ್ನೂ ಓದಿ : Rohit Sharma : ತನ್ನ 5 ಕೋಟಿಯನ್ನು ಸಪೋರ್ಟ್ ಸ್ಟಾಫ್’ಗೆ ನೀಡಲು ಮುಂದಾಗಿದ್ದ ರೋಹಿತ್ ಶರ್ಮಾ
ಇನ್ನು ಗೌತಮ್ ಗಂಭೀರನ ಅಹಂ. ಮತ್ತಷ್ಟು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದ್ದರೂ ಭಾರತ ತಂಡದಿಂದ ಬೇಗನೆ ಹೊರ ಬೀಳಲು ಕಾರಣ ಆತನ ಅಹಂ ಮತ್ತು ತಾನು ನಡೆದದ್ದೇ ದಾರಿ ಎಂಬ ನಡವಳಿಕೆ. ನಾಯಕನಾಗಿದ್ದ ಧೋನಿ ಇದನ್ನು ಸಹಿಸಲಿಲ್ಲ. ಗಂಭೀರನನ್ನು ಹೊಸಕಿ ಹಾಕಿ ಬಿಟ್ಟ. ಈಗ ಗೌತಮ್ ಗಂಭೀರ್ ಇಡೀ ತಂಡದ ಕಂಟ್ರೋಲ್ ತನ್ನ ಕೈಯಲ್ಲೇ ಇರಬೇಕೆಂಬ ಷರತ್ತು ಹಾಕಿಯೇ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾನೆ.
ಹಿಂದೊಮ್ಮೆ ಇದೇ ಮನಸ್ಥಿತಿಯಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ಬಂದಿದ್ದ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ತಂಡದ ಮೇಲೆ ನಿಯಂತ್ರಣ ಸಾಧಿಸಲು ಮಾಡಿದ ಪ್ರಯತ್ನ ಕೊನೆಗೆ ಇಡೀ ತಂಡವನ್ನು ಹೇಗೆ ಛಿದ್ರ ಛಿದ್ರ ಮಾಡಿತು ಎಂಬ ನಿದರ್ಶನ ಕಣ್ಣ ಮುಂದೆಯೇ ಇದೆ. ಗೌತಮ್ ಗಂಭೀರ್ ಮತ್ತೊಬ್ಬ ಗ್ರೆಗ್ ಚಾಪೆಲ್ ಆಗದಿದ್ದರೆ ಅಷ್ಟೇ ಸಾಕು..! ಹಾಗೆಂದು ಗೌತಮ್ ಗಂಭೀರನಲ್ಲಿ ಒಳ್ಳೆಯ ಗುಣಗಳೇ ಇಲ್ಲವೆಂದಲ್ಲ. ಆತನಲ್ಲೀ ಒಂದಷ್ಟು positive factorಗಳಿದ್ದಾವೆ.

ಗಂಭೀರ್ ಸದಾ ಸೋಲನ್ನು ದ್ವೇಷಿಸುವ ವ್ಯಕ್ತಿ. ಅದು ಹೇಗಾದರೂ ಸರಿ, ತಂಡ ಗೆಲ್ಲಬೇಕಷ್ಟೇ. ಅದಕ್ಕಾಗಿ ಕ್ರೀಡಾ ಸ್ಫೂರ್ತಿಯನ್ನು ಜಾಡಿಸಿ ಒದೆಯಲೂ ಹಿಂದೆ ಮುಂದೆ ನೋಡುವವನಲ್ಲ. ಇದು typical ಆಸ್ಟ್ರೇಲಿಯನ್ mindset. ‘’ನನ್ನ ಕೆಲಸ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವುದಲ್ಲ, ತಂಡವನ್ನು ಗೆಲ್ಲಿಸುವುದು’’ ಎಂದು ಕಳೆದ ಐಪಿಎಲ್ ಟೂರ್ನಿಯ ವೇಳೆ FairPlay ಪ್ರಶ್ನೆ ಎದುರಾದಾಗ ಗಂಭೀರ್ ಹೇಳಿದ್ದ ನೆನಪು.
ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ
ಗಂಭೀರ್’ನಲ್ಲಿರುವ ಮತ್ತೊಂದು ಒಳ್ಳೆಯ ಗುಣವೆಂದರೆ, ಆತ ತಪ್ಪು ಸರಿಗಳನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿ ಬಿಡುವ ಮನುಷ್ಯ. ಸಾಕಷ್ಟು ವರ್ಷ ಕ್ರಿಕೆಟ್ ಆಡಿದ ಅನುಭವವಿದೆ. ನಾಯಕನಾಗಿ ಕಪ್ ಗೆಲ್ಲಿಸಿದ ಇತಿಹಾಸವಿದೆ. ಮಾರ್ಗದರ್ಶಕನ ಸ್ಥಾನದಲ್ಲಿ ನಿಂತು ತಂಡವೊಂದಕ್ಕೆ ಚಾಂಪಿಯನ್ ಶಿಪ್ ಗೆದ್ದು ಕೊಟ್ಟ ಹಿನ್ನೆಲೆಯಿದೆ. ಅದ್ಭುತ ಕ್ರಿಕೆಟ್ brain ಇರುವ ಮನುಷ್ಯ. ಒಂದು ತಂಡದ ಯಶಸ್ಸಿಗೆ ಏನು ಬೇಕು ಎಂಬ ಸ್ಪಷ್ಟತೆಯಿದೆ.
ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನ ಎಂದರೆ ಅದು ಮುಳ್ಳಿನ ಸಿಂಹಾಸನ. ಆ ಸಿಂಹಾಸನದಲ್ಲಿ ಕೂರಲಿರುವ ಗೌತಮ್ ಗಂಭೀರ್ ‘ಹಳೆಯ ಲೆಕ್ಕ’ ಚುಕ್ತಾ ಮಾಡಲು ನಿಂತರೆ ಅದು ಭಾರತ ತಂಡಕ್ಕೆ ನಷ್ಟ. ಹಳೆಯದ್ದನ್ನೆಲ್ಲಾ ಮರೆತು ಹೊಸ ಇನ್ನಿಂಗ್ಸ್ ಶುರು ಮಾಡಲು ನಿಂತರೆ ಭಾರತ ತಂಡ ಇದುವರೆಗೆ ಕಾಣದ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಲಿರುವುದು ಸ್ಪಷ್ಟ.
Indian Cricket Team Coach Gautham Gambhir Special Story