ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ನೋಡಲು ಕಾತರರಾಗಿದ್ದಾರೆ. ಈ ನಡುವಲ್ಲೇ ಬಿಸಿಸಿಐ ವಿಶ್ವದ 120 ರಾಷ್ಟ್ರಗಳಲ್ಲಿ ಐಪಿಎಲ್ ಪ್ರಸಾರ ಮಾಡಲು ಮುಂದಾಗಿದೆ.

ಕೊರೊನಾ ವೈರಸ್ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಅವಕಾಶವಿಲ್ಲ. ಹೀಗಾಗಿ ಸ್ಪೋರ್ಟ್ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಐಪಿಎಲ್ ನೇರ ಪ್ರಸಾರಕ್ಕೆ ಬಿಸಿಸಿಐ ಸಿದ್ದತೆ ಮಾಡಿಕೊಂಡಿದೆ.

ವಿಶ್ವದ 120 ರಾಷ್ಟ್ರಗಳಲ್ಲಿ ಐಪಿಎಲ್ ಪ್ರಸಾರವಾಗಲಿದೆಯಾದ್ರೂ ಪಾಕಿಸ್ತಾನ ಹಾಗೂ ಚೀನಾದಲ್ಲಿ ಮಾತ್ರ ಈ ಬಾರಿಯ ಐಪಿಎಲ್ ಪ್ರಸಾರವಾಗೋದಿಲ್ಲ. ಎರಡೂ ದೇಶಗಳ ಯಾವುದೇ ವಾಹಿನಿಗಳು ಕೂಡ ನೇರಪ್ರಸಾರದ ಹಕ್ಕನ್ನು ಪಡೆಯಲು ಮುಂದೆ ಬಂದಿಲ್ಲ.

ಐಪಿಎಲ್ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬಂಗಾಳ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಟೂರ್ನಿಯನ್ನು ಪ್ರಸಾರ ಮಾಡಲಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಐಪಿಎಲ್ನ 13ನೇ ಆವೃತ್ತಿ ಆತಿಥ್ಯವನ್ನು ವಹಿಸಿ ಕೊಂಡಿದೆ. ಟೂರ್ನಿ ಸಲುವಾಗಿ ಶಾರ್ಜಾ, ದುಬೈ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಬಯೋ ಸೆಕ್ಯೂರ್ ವಾತಾವರಣ ನಿರ್ಮಾಣ ಮಾಡಲಾಗಿದ್ದು ಸಂಪೂರ್ಣ 60 ಪಂದ್ಯಗಳು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿವೆ.