ಜೈಲಲ್ಲಿ ಕಣ್ಣೀರಿಟ್ಟ ರಾಗಿಣಿ, ಸಂಜನಾಗೆ ಎರಡು ದಿನ ಸಿಸಿಬಿ ಡ್ರಿಲ್

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಇದೀಗ ಚಿತ್ರರಂಗದ ಕರಾಳತೆಯನ್ನು ಅನಾವರಣಗೊಳಿಸಿದೆ. ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ರೆ, ಸಂಜನಾ ಗರ್ಲಾನಿ ಸಿಸಿಬಿ ವಶದಲ್ಲಿದ್ದಾರೆ. ರಾಗಿಣಿ ಜೈಲಿನಲ್ಲಿ ಕಣ್ಣೀರಿಟ್ಟಿದ್ರೆ, ಸಂಜನಾಗೆ ಸಿಸಿಬಿ ಭಯ ಶುರುವಾಗಿದೆ.

ಸ್ಯಾಂಡಲ್​​ವುಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಜೈಲು ಪಾಲಾಗಿದ್ದಾರೆ. ಇದರ ಬೆನ್ನ ಹಿಂದೆಯೇ ಬಂಧಿತ ನಟಿ ಸಂಜನಾ ಅವರನ್ನು ಇನ್ನೆರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಂಜನಾ ವಿಚಾರಣೆಯ ವೇಳೆಯಲ್ಲಿ ಯಾವುದೇ ವಿಚಾರವನ್ನೂ ಬಾಯ್ಬಿಟ್ಟಿಲ್ಲ.

ಮುಖ್ಯವಾಗಿ ಸಂಜನಾ ಆಪ್ತ ರಾಹುಲ್ ಡ್ರಗ್ ಪೆಡ್ಲರ್ ಅನ್ನೋದು ವಿಚಾರಣೆಯ ವೇಳೆಯಲ್ಲಿ ಬಯಲಾಗಿದ್ದು, ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದಾರೆ. ರಾಹುಲ್ ಜೊತೆಗೆ ಸಂಜನಾ ಅತ್ಯಾಪ್ತತೆ ಹೊಂದಿರುವುದು ಹಲವು ಪೋಟೋಗಳಿಂದಲೇ ಬಯಲಾಗಿದೆ. ಇನ್ನು ಡ್ರಗ್ಸ್ ಪಾರ್ಟಿಗಳಲ್ಲಿಯೂ ಸಂಜನಾ ಹೆಚ್ಚು ಹೆಚ್ಚಾಗಿ ಭಾಗಿಯಾಗಿರೋ ಕುರಿತು ರಾಹುಲ್ ಬಾಯ್ಬಿಟ್ಟಿದ್ದಾನೆ.

ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಈಗಾಗಲೇ ಸಂಜನಾ ಬಳಿಯಲ್ಲಿದ್ದ ಮೊಬೈಲ್ ಲಭ್ಯವಾಗಿದೆ. ಆದರೆ ಸಂಜನಾ ಮೊಬೈಲ್ ನಲ್ಲಿ ಸಿಮ್ ಕಾರ್ಡ್ ನಾಪತ್ತೆಯಾಗಿದೆ. ಹೀಗಾಗಿ ಸಂಜನಾ ಸಾಕ್ಷ್ಯ ನಾಶ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಇನ್ನೆರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಸಂಜನಾ ಅವರನ್ನು ಸಿಸಿಬಿ ತನಿಖಾಧಿಕಾರಿ ಅಂಜುಮಾಲಾ ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಈ ವೇಳೆಯಲ್ಲಿ ಸಂಜನಾ ಅವರಿಂದ ಇನ್ನಷ್ಟು ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳು ಪಡೆಯುವ ಸಾಧ್ಯತೆಯಿದೆ.

ಇನ್ನು ನಟಿ ರಾಗಿಣಿ ಸೇರಿದಂತೆ ಲೂಮ್‌ಪೆಪ್ಪರ್, ರಾಹುಲ್, ಪ್ರಶಾಂತ ರಾಂಕ, ನಿಯಾಜ್ ಅಹ್ಮದ್ ಪರಪ್ಪನ ಅಗ್ರಹಾರ ಜೈಲು ಸೇರಿದ್ರೆ, ನಟಿ ಸಂಜನಾ, ವೀರೇನ್ ಖನ್ನಾ, ರವಿಶಂಕರ್ ಸೆಪ್ಟೆಂಬರ್ 16ರ ವರೆಗೆ ಸಿಸಿಬಿ ವಿಚಾರಣೆಯನ್ನು ಎದುರಿಸಲಿದ್ದಾರೆ.

Leave A Reply

Your email address will not be published.