
ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂನರ್ನಿಗಳಲ್ಲೊಂದಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಇದೀಗ ಯುಎಇಗೆ ಶಿಫ್ಟ್ ಆಗದೆ. ಐಪಿಎಲ್ ಆಯೋಜನೆಗೆ ಬಿಸಿಸಿಐ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವಲ್ಲೇ ವಕೀಲರೊಬ್ಬರು ಐಪಿಎಲ್ ಟೂರ್ನಿಯನ್ನು ಭಾರತದಲ್ಲಿಯೇ ಆಯೋಜನೆ ಮಾಡುವಂತೆ ಆಗ್ರಹಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿಯಾಗಿದ್ದು, 2019ರಲ್ಲಿ ಐಪಿಎಲ್ ಟೂರ್ನಿಯ ಒಟ್ಟು ಬ್ರ್ಯಾಂಡ್ ಮೌಲ್ಯ 475 ಶತಕೋಟಿ ರೂಪಾಯಿ ಆಗಿದೆ. ಬಿಸಿಸಿಐನ ಬಹುದೊಡ್ಡ ಆದಾಯದ ಮೂಲ ಕೂಡ ಹೌದು, ಈ ಬಾರಿಯೂ ದೇಶದಲ್ಲಿಯೇ ಐಪಿಎಲ್ ಪಂದ್ಯಾವಳಿಯನ್ನು ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಅದರಂತೆಯೇ ಮಾರ್ಚ್ 29ರಿಂದ ಮೇ 24ರ ವರೆಗೆ ಐಪಿಎಲ್ 13ನೇ ಆವೃತ್ತಿಯ ಪಂದ್ಯಗಳು ನಡೆಯಬೇಕಾಗಿತ್ತು.

ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಐಪಿಎಲ್ ಮುಂದೂಡಿಕೆಯಾಗಿತ್ತು. ಇದೀಗ ಕೇಂದ್ರ ಸರಕಾರ ಅನುಮತಿಯನ್ನು ಪಡೆದು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿರುವ 3 ಕ್ರೀಡಾಂಗಣಗಳಲ್ಲಿ ಬಯೋ ಸೆಕ್ಯೂರ್ ವಾತಾವರಣ ನಿರ್ಮಿಸಿ ಮುಚ್ಚಿದ ಕ್ರೀಡಾಂಗಣದಲ್ಲಿ ಸಂಪೂರ್ಣ 60 ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ.

ಐಸಿಸಿ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಬೇಕಿದ್ದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಿದ ಬಳಿಕ ಆ ಅವಧಿಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಯೋಜನೆ ರೂಪಿಸಿತ್ತು.

ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ ಭಾರತದಲ್ಲಿ ಸದ್ಯಕ್ಕೆ ಯಾವುದೇ ಕ್ರಿಕೆಟ ಟೂರ್ನಿ ಆಯೋಜನೆ ಮಾಡುವುದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಾವಳಿಯನ್ನು ವಿದೇಶಕ್ಕೆ ಸ್ಥಳಾಂತರಿಸಿದೆ.

ಆದರೆ ವಿದೇಶದಲ್ಲಿ ಪಂದ್ಯಾವಳಿಯನ್ನು ಆಯೋಜನೆ ಮಾಡುವುದರಿಂದ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಐಪಿಎಲ್ ಟೂರ್ನಿ ನಡೆಯಲಿ ಅಂತಾ ಮುಂಬೈ ಮೂಲದ ವಕೀಲರಾದ ಅಭಿಷೇಕ್ ಲಾಗೋ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ 12 ವರ್ಷಗಳ ಅವಧಿಯಲ್ಲಿ ಐಪಿಎಲ್ ಟೂರ್ನಿ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಒಂದು ಪಂದ್ಯಾವಳಿಯಿಂದ ಹಲವು ವಲಯಗಳು ಅಭಿವೃದ್ದಿಯನ್ನು ಕಂಡಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಿದೆ.

ಒಂದೊಮ್ಮೆ ಪಂದ್ಯಾವಳಿ ವಿದೇಶದಲ್ಲಿ ನಡೆದರೆ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಲಿದೆ ಎಂದು ಹೇಳಲಾಗಿದೆ.

ಕೇಂದ್ರ ಸರಕಾರದ ಇದೀಗ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆಯನ್ನು ಜಾರಿಗೊಳಿಸಿದ್ದು, ಹಂತ ಹಂತವಾಗಿ ಹಲವು ಸೇವೆಗಳನ್ನು ಪುನರಾರಂಭ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಅಭಿಷೇಕ್ ಲಾಗೋ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ನ ಚೀಪ್ ಜಸ್ಟಿಸ್ ದೀಪಾಂಕರ್ ದತ್ತಾ ಹಾಗೂ ಜಸ್ಟಿಸ್ ರೇವತಿ ಮೋಹಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ವಿಚಾರಣೆಯನ್ನು ನಡೆಸಲಿದೆ.