ಗೃಹ ಸಚಿವ ಅಮಿತ್ ಶಾಗೆ ಅನಾರೋಗ್ಯ : ಮರಳಿ ಆಸ್ಪತ್ರೆಗೆ ದಾಖಲು

0

ನವದೆಹಲಿ : ಕರೊನಾ ಸೋಂಕಿನಿಂದಾಗಿ ಕಳೆದ ವಾರವಷ್ಟೇ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿದ್ದ ಗೃಹ ಸಚಿವ ಅಮಿತ್‌ ಷಾ ಅವರಿಗೆ ಮರಳಿ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ಜನವರಿಯಲ್ಲಿ ಎಚ್‌1ಎನ್‌1 ಸೋಂಕಿಗೆ ಒಳಗಾಗಿದ್ದ ಅಮಿತ್‌ ಷಾ ಅವರು, ಅದರಿಂದ ಗುಣಮುಖರಾಗಿ ಬಂದಿದ್ದರು. ನಂತರ ಕರೊನಾ ಸೋಂಕಿಗೆ ಒಳಗಾಗಿದ್ದರು. ಆಗಸ್ಟ್‌ 2ರಂದು ಕರೊನಾದ ಸಾಮಾನ್ಯ ಲಕ್ಷಣಗಳು ಇದ್ದ ಹಿನ್ನೆಲೆಯಲ್ಲಿ ತಾವು ಆಸ್ಪತ್ರೆಗೆ ದಾಖಲಾಗುತ್ತಿರುವುದಾಗಿ ಅವರು ಟ್ವೀಟ್‌ ಮಾಡಿದ್ದರು.

ಆಗಸ್ಟ್‌ 14ರಂದು ಕರೊನಾ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು. ಸದ್ಯ ಹೋಂ ಐಸೋಲೇಷನ್‌ನಲ್ಲಿ ಕೆಲ ದಿನ ಇರುವುದಾಗಿ ಹೇಳಿದ್ದರು. ಆದರೆ ಈ ನಡುವೆಯೇ, ಇದೀಗ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಅಮಿತ್‌ ಷಾ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ಗೆ ಒಳಗಾಗಿದ್ದರು ಮತ್ತು ಪರೀಕ್ಷಾ ಫಲಿತಾಂಶಗಳು ಅವರ ಎದೆಯಲ್ಲಿ ಸ್ವಲ್ಪ ಸೋಂಕು ಇದೆ ಎಂದು ತಿಳಿದುಬಂದಿದೆ. ಪ್ರಸ್ತುತ ಎಐಎಂಎಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ನೇತೃತ್ವದ ವೈದ್ಯಕೀಯ ತಂಡದವರಿಂದ ನೋಡಿಕೊಳ್ಳಲಾಗುತ್ತಿದೆ.

ಆಯಾಸ ಮತ್ತು ಎದೆನೋವಿನಿಂದ ಬಳಲುತ್ತಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲು ಮಾಡಲಾಗಿದೆ.

Leave A Reply

Your email address will not be published.