Ranji Trophy: ನಾಳೆ ಕರ್ನಾಟಕಕ್ಕೆ ಗೋವಾ ಎದುರಾಳಿ, ಸಚಿನ್ ಪುತ್ರ ಅರ್ಜುನ್ ಮೇಲೆ ಎಲ್ಲರ ಕಣ್ಣು

ಪೊರ್ವರಿಮ್ (ಗೋವಾ): ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ‘ ಗುಂಪಿನ ತನ್ನ 3ನೇ ಲೀಗ್ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ. ಕರ್ನಾಟಕ Vs ಗೋವಾ (Karnataka Vs Goa) ಪಂದ್ಯ ನಾಳೆ (ಮಂಗಳವಾರ) ಪೊರ್ವರಿಮ್‘ನಲ್ಲಿರುವ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿ ಮೈದಾನದಲ್ಲಿ ಆರಂಭವಾಗಲಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರ್ವಿಸಸ್ ವಿರುದ್ಧದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡು 3 ಅಂಕಗಳಿಗೆ ತೃಪ್ತಿ ಪಟ್ಟಿದ್ದ ಕರ್ನಾಟಕ ತಂಡ, ಪಾಂಡಿಚೇರಿ ವಿರುದ್ಧದ ಪಂದ್ಯವನ್ನು ಇನ್ನಿಂಗ್ಸ್ ಮತ್ತು 7 ರನ್‘ಗಳಿಂದ ಗೆದ್ದು 7 ಅಂಕ ಸಂಪಾದಿಸಿತು. ಆಡಿರುವ 2 ಪಂದ್ಯಗಳಿಂದ 10 ಅಂಕ ಸಂಪಾದಿಸಿರುವ ಕರ್ನಾಟಕ ಎಲೈಟ್ ‘ಸಿ‘ ಗುಂಪಿನಲ್ಲಿ 2ನೇ ಸ್ಥಾನದಲ್ಲಿದ್ದು, ಗೋವಾ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿದೆ.

ಕರ್ನಾಟಕದ ಮಾಜಿ ಕೋಚ್ ಮನ್ಸೂರ್ ಅಲಿ ಖಾನ್ ಪ್ರಸಕ್ತ ಸಾಲಿನಲ್ಲಿ ಗೋವಾ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೋವಾ ಪರ ಆಡುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮೇಲೆ ಎಲ್ಲರ ಗಮನ ನೆಟ್ಟಿದೆ. ರಾಜಸ್ಥಾನ ವಿರುದ್ಧ ಆಡಿದ ಚೊಚ್ಚಲ ರಣಜಿ ಪಂದ್ಯದಲ್ಲೇ ಅರ್ಜುನ್ ತೆಂಡೂಲ್ಕರ್ ಅಮೋಘ ಶತಕ ಬಾರಿಸಿ ಗಮನ ಸೆಳೆದಿದ್ದರು.

ಕರ್ನಾಟಕ ಪರ ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ಉಪನಾಯಕ ಆರ್.ಸಮರ್ಥ್ ಉತ್ತಮ ಫಾರ್ಮ್’ನಲ್ಲಿದ್ದಾರೆ. ನಾಯಕ ಮಯಾಂಕ್ ಅಗರ್ವಾಲ್, ಮಾಜಿ ನಾಯಕ ಮನೀಶ್ ಪಾಂಡೆ, ಯುವ ಬ್ಯಾಟರ್’ಗಳಾದ ವಿಶಾನ್ ಓನಟ್, ನಿಕಿನ್ ಜೋಸ್ ಕರ್ನಾಟಕದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಆಲ್ರೌಂಡರ್’ಗಳಾದ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಮಧ್ಯಮ ವೇಗಿಗಳಾದ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಹಾಗೂ ವೈಶಾಖ್ ವಿಜಯ್ ಕುಮಾರ್ ಕೂಡ ಉತ್ತಮ ಫಾರ್ಮ್’ನಲ್ಲಿರುವುದು ಕರ್ನಾಟಕದ ಬಲವನ್ನು ಹೆಚ್ಚಿಸಿದೆ.

Ranji Trophy 2022-23: ಗೋವಾ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ
1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ವಿಶಾನ್ ಓನಟ್, 4.ನಿಕಿನ್ ಜೋಸ್, 5.ಮನೀಶ್ ಪಾಂಡೆ, 6.ಶ್ರೇಯಸ್ ಗೋಪಾಲ್, 7ಬಿ.ಆರ್ ಶರತ್ (ವಿಕೆಟ್ ಕೀಪರ್), 8.ಕೃಷ್ಣಪ್ಪ ಗೌತಮ್, 9.ರೋನಿತ್ ಮೋರೆ, 10.ವೈಶಾಖ್ ವಿಜಯ್ ಕುಮಾರ್, 11.ವಿದ್ವತ್ ಕಾವೇರಪ್ಪ, 12.ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), 13.ಜೆ.ಸುಚಿತ್, 14.ಕೆ.ವಿ ಸಿದ್ಧಾರ್ಥ್, 15.ವಿ.ಕೌಶಿಕ್.

ಕರ್ನಾಟಕ Vs ಗೋವಾ ರಣಜಿ ಪಂದ್ಯ
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿ ಮೈದಾನ, ಪೊರ್ವರಿಮ್

ಇದನ್ನೂ ಓದಿ : World Test Championship : 2ನೇ ಸ್ಥಾನದಲ್ಲಿ ಟೀಮ್ ಇಂಡಿಯಾ, ಹೇಗಿದೆ ಭಾರತದ ಫೈನಲ್ ಹಾದಿ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Rohit Sharma : ಗಾಯದಿಂದ ಚೇತರಿಸಿಕೊಂಡ ಹಿಟ್ ಮ್ಯಾನ್, ಬಿಕೆಸಿಯಲ್ಲಿ ರೋಹಿತ್ ಬ್ಯಾಟಿಂಗ್ ಅಭ್ಯಾಸ

Karnataka Vs Goa Ranji Trophy 2022-23 Playing Sachin Tendulkar son Arjun Tendulkar

Comments are closed.