Karnataka cricket team : ಕರ್ನಾಟಕ ಕ್ರಿಕೆಟನ್ನು ಹಳ್ಳ ಹಿಡಿಸಿದ್ದು ಇದೇ ವ್ಯಕ್ತಿನಾ ?

ಬೆಂಗಳೂರು : ಕರ್ನಾಟಕ ಕ್ರಿಕೆಟ್ ತಂಡ (Karnataka Ranji Team) ಕಳೆದ ಏಳು ವರ್ಷಗಳಲ್ಲಿ ಒಮ್ಮೆಯೂ ರಣಜಿ ಟ್ರೋಫಿ ಗೆದ್ದಿಲ್ಲ. ಕನಿಷ್ಠ ಫೈನಲ್”ಗೂ ತಲುಪಿಲ್ಲ. 2013-14 ಹಾಗೂ 2014-15ರಲ್ಲಿ ಆರ್.ವಿನಯ್ ಕುಮಾರ್ ನಾಯಕತ್ವದಲ್ಲಿ ಸತತ 2 ಬಾರಿ ಚಾಂಪಿಯನ್ ಆಗುತ್ತಾ ಬಂದದ್ದೇ ಕೊನೆ. ನಂತರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ (Karnataka cricket team) ಸತತವಾಗಿ ಮುಗ್ಗರಿಸುತ್ತಾ ಬಂದಿದೆ.

ತಂಡದ ವೈಫಲ್ಯದಲ್ಲಿ ಆಟಗಾರರ ಪಾತ್ರ 50%, ಕೋಚ್’ಗಳ ಪಾತ್ರ , ಕೋಚ್”ಗಳ ಪಾತ್ರ 25%. ಉಳಿದ 25% ಹೊಣೆಗಾರಿಗೆ ಆಯ್ಕೆ ಸಮಿತಿಯದ್ದು. ಯಾಕಂದ್ರೆ ತಂಡವನ್ನು ಆಯ್ಕೆ ಮಾಡುವವರು ಇವರೇ. ಪ್ಲೇಯಿಂಗ್ XIನಲ್ಲಿ ಯಾರೆಲ್ಲಾ ಆಡ್ಬೇಕು ಎಂಬ ನಿರ್ಧಾರದ ಮೇಲೆಯೂ ಆಯ್ಕೆ ಸಮಿತಿ ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ಕರ್ನಾಟಕ ರಣಜಿ ತಂಡದ ಸತತ ವೈಫಲ್ಯದಲ್ಲಿ ಆಯ್ಕೆ ಸಮಿತಿಯ ಪಾತ್ರವೂ ಇದೆ. ಆ ಪಾತ್ರದಲ್ಲಿ ದೊಡ್ಡ ಪಾಲುದಾರ ಆಯ್ಕೆ ಸಮಿತಿಯ ಮುಖ್ಯಸ್ಥ, ಮಾಜಿ ರಣಜಿ ಆಟಗಾರ ಫಝಲ್ ಖಲೀಲ್.

ಫಝಲ್ ಖಲೀಲ್ 90ರ ದಶಕದಲ್ಲಿ ಕರ್ನಾಟಕ ಪರ 22 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಆಟಗಾರ. ಅದೇ ಮಾನದಂಡದಲ್ಲಿ ರಾಜ್ಯ ಆಯ್ಕೆ ಸಮಿತಿ ಸೇರಿರುವ ಫಝಲ್ ಖಲೀಲ್ (KSCA Chief Selection Fazal Khaleel), ಕಳೆದ 11 ವರ್ಷಗಳಿಂದ ಆಯ್ಕೆ ಸಮಿತಿಯಲ್ಲಿದ್ದಾರೆ. 2011ರಲ್ಲಿ ಆಯ್ಕೆ ಸಮಿತಿ ಸದಸ್ಯರಾಗಿದ್ದ ಫಝಲ್, ಕಳೆದ 2 ವರ್ಷಗಳಿಂದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

ಹಾಗಾದ್ರೆ ಕರ್ನಾಟಕ ತಂಡದ ವೈಫಲ್ಯದಲ್ಲಿ ಫಝಲ್ ಖಲೀಲ್ ಪಾತ್ರವೇನು? ಈ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದುಕೊಂಡು ರಾಜ್ಯ ರಣಜಿ ತಂಡದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಬದಲು ಕೆಲವೇ ವ್ಯಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂಬ ಮಾತುಗಳು KSCA ವಲಯದಿಂದಲೇ ಕೇಳಿ ಬರುತ್ತಿವೆ.

ನಾಯಕ ಮತ್ತು ಕೋಚ್ ಅಷ್ಟೇ ನಿರ್ಧರಿಸಬೇಕಿರುವ ತಂಡದ ಪ್ಲೇಯಿಂಗ್ XI ನಿರ್ಧಾರದಲ್ಲಿ ಮೂಗು ತೂರಿಸುವುದು, ಇಂಥದ್ದೇ ಆಟಗಾರರನ್ನು ಆಡಿಸಬೇಕೆಂದು ಕೋಚ್’ಗಳಿಗೆ ನಿರ್ದೇಶನ ನೀಡುವುದು, ಕೆಲ ಆಟಗಾರರು ಫಾರ್ಮ್ ಕಳೆದುಕೊಂಡಿರುವುದು ಜಗತ್ತಿಗೇ ಕಾಣುತ್ತಿದ್ದರೂ, ಅಂತಹ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು, ರಣಜಿ ಟ್ರೋಫಿ ಮಟ್ಟದಲ್ಲಿ ಆಡಲು ಸಮರ್ಥರಲ್ಲದವರಿಗೆ ಕರ್ನಾಟಕ ತಂಡದಲ್ಲಿ ಅವಕಾಶ ನೀಡುವುದು. ಇವೆಲ್ಲಾ ಫಝಲ್ ಖಲೀಲ್ ಕಳೆದ ಕೆಲ ವರ್ಷಗಳಿಂದ ಮಾಡುತ್ತಾ ಬಂದಿರುವ ಕೆಲಸ ಎಂದು KSCA ಮೂಲಗಳೇ ಹೇಳುತ್ತವೆ.

ರಾಜ್ಯ ರಣಜಿ ತಂಡದ ಕೆಲ ಹಿರಿಯ ಆಟಗಾರರಿಗೂ ಆಯ್ಕೆ ಸಮಿತಿ ಮುಖ್ಯಸ್ಥ ಫಝಲ್ ಖಲೀಲ್ ಜೊತೆ ಒಳ್ಳೆಯ ಸಂಬಂಧವಿಲ್ಲ. ಫಝಲ್ ಖಲೀಲ್ ಮತ್ತು ಕರ್ನಾಟಕದ ತಂಡದ ಅನುಭವಿ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಮಧ್ಯೆ ಇತ್ತೀಚೆಗೆ ಮಾತಿನ ಚಕಮಕಿಯೂ ನಡೆದಿತ್ತು ಎನ್ನಲಾಗುತ್ತಿದೆ.

ಆಯ್ಕೆ ಸಮಿತಿಯಲ್ಲಿರುವವರ ಪೈಕಿ ಅತೀ ಹೆಚ್ಚು ಪ್ರಥಮದರ್ಜೆ ಪಂದ್ಯಗಳನ್ನಾಡಿದವರೇ ಮುಖ್ಯಸ್ಥರಾಗಬೇಕೆಂಬುದು ರಾಜ್ಯ ಕ್ರಿಕೆಟ್ ಸಂಸ್ಥೆಯ ನಿಯಮ. ಈಗಿನ ಆಯ್ಕೆ ಸಮಿತಿಯಲ್ಲಿ ಅತೀ ಹೆಚ್ಚು ಪ್ರಥಮದರ್ಜೆ ಪಂದ್ಯಗಳನ್ನಾಡಿರುವವರು ಆನಂದ್ ಕಟ್ಟಿ. 90ರ ದಶಕದಲ್ಲಿ ರಾಜ್ಯ ತಂಡದ ಪರ ಮಿಂಚಿದ್ದ ಕಟ್ಟಿ, 46 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. ಅರ್ಹವಾಗಿ ಇವರೇ ಆಯ್ಕೆ ಸಮಿತಿಯ ಮುಖ್ಯಸ್ಥರಾಗಬೇಕಿತ್ತು. ಆದರೆ ನೇರ ನಿಷ್ಠುರ ವ್ಯಕ್ತಿತ್ವದ ಆನಂದ್ ಕಟ್ಟಿಯವರನ್ನು ಕಡೆಗಣಿಸಿ, ಕೇವಲ 22 ಪಂದ್ಯಗಳನ್ನಾಡಿರುವ ಖಲೀಲ್ ಅವರನ್ನು 2 ವರ್ಷಗಳ ಹಿಂದೆ ಸೆಲೆಕ್ಷನ್ ಕಮಿಟಿ ಚೇರ್ಮನ್ ಆಗಿ ಮಾಡಲಾಗಿತ್ತು.

ಆಯ್ಕೆ ಸಮಿತಿ ಸದಸ್ಯರು, ಅದರಲ್ಲೂ ಮುಖ್ಯಸ್ಥರು ರಣಜಿ ಪಂದ್ಯಗಳನ್ನು ಮೈದಾನದಲ್ಲಿದ್ದುಕೊಂಡೇ ವೀಕ್ಷಿಸಬೇಕು. ಆಗ ಮಾತ್ರ ತಂಡದ ಪ್ಲಸ್-ಮೈನಸ್, ಆಟಗಾರರ ಶಕ್ತಿ-ದೌರ್ಬಲ್ಯವನ್ನು ಅರಿತುಕೊಳ್ಳಲು ಸಾಧ್ಯ. ಆದರೆ ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಫಝಲ್ ಖಲೀಲ್ ಮೈದಾನಕ್ಕೆ ಆಗಮಿಸಿದ ನಿದರ್ಶನಗಳು ತೀರಾ ಅಂದರೆ ತೀರಾ ಕಡಿಮೆ. ಮೊನ್ನೆ ಮೂರೇ ದಿನಗಳಲ್ಲಿ ಅಂತ್ಯಗೊಂಡ ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲರೆಡು ದಿನ ಖಲೀಲ್ ಪತ್ತೆಯೇ ಇರಲಿಲ್ಲ. ಬೆಂಗಳೂರಿನಲ್ಲೇ ಪಂದ್ಯ ನಡೆದರೂ, ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸದ ಆಯ್ಕೆ ಸಮಿತಿಯ ಮುಖ್ಯಸ್ಥನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಕಳೆದ ಆರು ರಣಜಿ ಟೂರ್ನಿಗಳಲ್ಲಿ ಕರ್ನಾಟಕ ತಂಡದ ಸಾಧನೆ
2015-16: ಲೀಗ್ ಹಂತ
2016-17: ಕ್ವಾರ್ಟರ್ ಫೈನಲ್
2017-18: ಸೆಮಿಫೈನಲ್
2018-19: ಸೆಮಿಫೈನಲ್
2019-20: ಸೆಮಿಫೈನಲ್
2021-22: ಕ್ವಾರ್ಟರ್ ಫೈನಲ್

ಇದನ್ನೂ ಓದಿ : ಉಮ್ರಾನ್ ಮಲಿಕ್‌ಗೆ ಅವಕಾಶ ಸಿಗದಿರಲು ಕೋಚ್ ದ್ರಾವಿಡ್ ಅವರೇ ಕಾರಣ

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

KSCA Chief Selection Fazal Khaleel responsible for the continuous defeat of the Karnataka cricket team

Comments are closed.