Major League Cricket : ಮುಂಬೈ ಇಂಡಿಯನ್ಸ್’ಗೆ ಮತ್ತೊಂದು ಚಾಂಪಿಯನ್ ಪಟ್ಟ, ಸಿಡಿಲಬ್ಬರದ ಶತಕ ಬಾರಿಸಿ ಟ್ರೋಫಿ ಗೆದ್ದುಕೊಟ್ಟ ನಿಕೋಲಸ್ ಪೂರನ್

ನ್ಯೂಯಾರ್ಕ್ : ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿಯ ಹೊಸ ತಂಡವಾಗಿರುವ ಎಂಐ ನ್ಯೂಯಾರ್ಕ್ (MI New York) ತಂಡ, ಚೊಚ್ಚಲ ಆವೃತ್ತಿಯ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (Major League Cricket) ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಾಯಕ ನಿಕೋಲಸ್ ಪೂರನ್ ಸಿಡಿಲಬ್ಬರದ ಶತಕ ಬಾರಿಸಿ ಎಂಐ ನ್ಯೂಯಾರ್ಕ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೀಟಲ್ ಒರ್ಕಾಸ್ ತಂಡ, ಕ್ವಿಂಟನ್ ಡಿ ಕಾಕ್ ಅವರ ಸ್ಫೋಟಕ 87 ರನ್ (52 ಎಸೆತ, 9 ಬೌಂಡರಿ, 4 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 183 ರನ್’ಗಳ ಸವಾಲಿನ ಮೊತ್ತ ಕಲೆ ಹಾಕಿತು.

ಫೈನಲ್ ಗೆಲ್ಲಲು 184 ರನ್’ಗಳ ಗುರಿ ಬೆನ್ನಟ್ಟಿದ ಎಂಐ ನ್ಯೂಯಾರ್ಕ್ ತಂಡ ಇನ್ನಿಂಗ್ಸ್’ನ ಮೊದಲ ಓವರ್’ನಲ್ಲೇ ಆಘಾತ ಎದುರಿಸಿತು. ಆದರೆ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದ ನಾಯಕ ನಿಕೋಲಸ್ ಪೂರನ್ ಅಕ್ಷರಶಃ ಅಬ್ಬರಿಸಿದರು. ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನವಿತ್ತ ಪೂರನ್, ಕೇವಲ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 13 ಸಿಡಿಲ ಸಿಕ್ಸರ್’ಗಳ ನೆರವಿನಿಂದ ಅಜೇಯ 137 ರನ್ ಬಾರಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಪೂರನ್ ಅವರ ಸ್ಫೋಟಕ ಶತಕ ಬಲದಿಂದ ಎಂಐ ನ್ಯೂಯಾರ್ಕ್ ತಂಡ ಕೇವಲ 16 ಓವರ್’ಗಳಲ್ಲೇ 3 ವಿಕೆಟ್ ಒಪ್ಪಿಸಿ ಗೆಲುವಿನ ಗುರಿ ತಲುಪಿತು.

ಐಪಿಎಲ್’ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್’ನಲ್ಲಿ ಫ್ರಾಂಚೈಸಿಯನ್ನು ಖರೀದಿಸಿ ಟಿ20 ಕ್ರಿಕೆಟ್’ನ ಸ್ಟಾರ್ ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಕಟ್ಟಿತ್ತು. ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್’ನ ನಿಕೋಲಸ್ ಪೂರನ್, ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್, ಆಸ್ಟ್ರೇಲಿಯಾದ ಟಿಮ್ ಡೇವಿಡ್, ನ್ಯೂಜಿಲೆಂಡ್’ನ ಟ್ರೆಂಟ್ ಬೌಲ್ಟ್ ಮತ್ತು ಅಫ್ಘಾನಿಸ್ತಾದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಎಂಐ ನ್ಯೂಯಾರ್ಕ್ ತಂಡದ ಪರ ಆಡಿದ್ದಾರೆ. ಇದನ್ನೂ ಓದಿ : World Cup 2023 : ವಿಶ್ವಕಪ್ 2023 : ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹೊಸ ದಿನಾಂಕ ಪ್ರಕಟ

Major League Cricket: Nicholas Pooran won the trophy by scoring a thunderous century to give another champion to Mumbai Indians.

Comments are closed.