ಮಂಗಳೂರು : ಉಸೇನ್ ಬೋಲ್ಟ್ ದಾಖಲೆಯನ್ನು ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರು ಹಿಂದಿಕ್ಕೋ ಮೂಲಕ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ್ರು. ಆದ್ರೀಗ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರ ದಾಖಲೆಯನ್ನೂ ನಿಶಾಂತ್ ಶೆಟ್ಟಿ ಮುರಿಯೋ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ವೇಣೂರಿನಲ್ಲಿ ನಡೆದ ಸೂರ್ಯಚಂದ್ರ ಜೋಡುಕರೆ ಕಂಬಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಜಗೋಳಿಯ ಜೋಗಿಬೆಟ್ಟುವಿನ ನಿವಾಸಿ ನಿಶಾಂತ್ ಶೆಟ್ಟಿ ಹೊಸದಾಖಲೆ ಬರೆದಿದ್ದಾರೆ. ಮೂಡಬಿದರೆಯ ಶ್ರೀನಿವಾಸಗೌಡರು 100 ಮೀಟರ್ ಓಟವನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಕ್ರಮಿಸೋ ಮೂಲಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ರು. ಕಂಬಳದ 143 ಮೀಟರ್ ದೂರವನ್ನು ಶ್ರೀನಿವಾಸ ಗೌಡರು ಕೇವಲ 13.62 ಸೆಕೆಂಡ್ ಗಳಲ್ಲಿ ಕ್ರಮಿಸಿದ್ರೆ ನಿಶಾಂತ್ ಶೆಟ್ಟಿ ಕೇವಲ 13.61 ಸೆಕೆಂಡ್ ಗಳಲ್ಲಿ ಈ ದೂರವನ್ನು ಕ್ರಮಿಸಿದ್ದರು. ಅಂದರೆ ನಿಶಾಂತ್ ಶೆಟ್ಟಿ 100 ಮೀಟರ್ ದೂರವನ್ನು ಕೇವಲ 9.52 ಸೆಕೆಂಡ್ ಗಳಲ್ಲಿ ಕ್ರಮಿಸೋ ಮೂಲಕ ಕಂಬಳ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಶ್ರೀನಿವಾಸ ಗೌಡರು ದಾಖಲೆ ಬರೆಯುತ್ತಿದ್ದಂತೆಯೇ ಕೇಂದ್ರ ಸರಕಾರ ಒಲಿಂಪಿಕ್ಸ್ ಟ್ರಯಲ್ಸ್ ನಲ್ಲಿ ಭಾಗಿಯಾಗಲು ಆಹ್ವಾನ ನೀಡಿತ್ತು. ಮಾತ್ರವಲ್ಲ ರಾಜ್ಯ ಸರಕಾರ ಕೂಡ ಶ್ರೀನಿವಾಸ ಗೌಡರನ್ನು ಅಭಿನಂದಿಸಿತ್ತು. ಇದೀಗ ಕಂಬಳ ಕ್ರೀಡೆಯಲ್ಲಿ ಮತ್ತೋರ್ವ ಪ್ರತಿಭೆ ಬೆಳಕಿಗೆ ಬಂದಿದೆ.