ಸೋಮವಾರ, ಏಪ್ರಿಲ್ 28, 2025
HomeSportsCricketRanji Trophy ಕ್ವಾರ್ಟರ್ ಫೈನಲ್: ಕರ್ನಾಟಕವನ್ನು ಸೋಲಿಸಿದ್ದೇ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್

Ranji Trophy ಕ್ವಾರ್ಟರ್ ಫೈನಲ್: ಕರ್ನಾಟಕವನ್ನು ಸೋಲಿಸಿದ್ದೇ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್

- Advertisement -

ಬೆಂಗಳೂರು : ಇಬ್ಬರೂ ಕರ್ನಾಟಕದ ಸ್ಟಾರ್ ಕ್ರಿಕೆಟಿಗರು, ಕನ್ನಡದ ಬಾವುಟವನ್ನು ದೇಶ ವಿದೇಶಗಳಲ್ಲಿ ಹಾರಿಸಿದ ಕೀರ್ತಿ ವಿಕ್ರಮರು. ಟೀಮ್ ಇಂಡಿಯಾ ಸ್ಟಾರ್’ ಗಳಾದ ಮನೀಶ್ ಪಾಂಡೆ (Manish Pandey) ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ಇಬ್ಬರೂ ಭಾರತ ತಂಡದಿಂದ ಹೊರ ಬಿದ್ದಿದ್ದಾರೆ. ಟೀಮ್ ಇಂಡಿಯಾದಿಂದ ಹೊರ ಬಿದ್ದವರು ದೇಶೀಯ ಕ್ರಿಕೆಟ್’ನಲ್ಲಿ (Ranji Trophy) ಉತ್ತಮವಾಗಿ ಆಡಿ ಮತ್ತೆ ಭಾರತ ತಂಡ ಸೇರುವ ಪ್ರಯತ್ನ ಮಾಡುತ್ತಾರೆ. ಆದರೆ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರೂ ಈ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್’ಸಿಎ (KSCA) ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ (Ranji Trophy) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಸೋಲು ಅನುಭವಿಸಿ ರಣಜಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡದ ಸೋಲಿಗೆ ಕಾರಣವಾದವರಲ್ಲಿ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಪ್ರಮುಖರು. ಭಾರತ ತಂಡದ ಪರ ಆಡಿದ ಅನುಭವ ಹೊಂದಿರುವ ಕಾರಣ ಇಬ್ಬರ ಮೇಲೆಯೂ ನಿರೀಕ್ಷೆ ಹೆಚ್ಚಿತ್ತು. ಆದರೆ ಪಂದ್ಯದ ಎರಡೂ ಇನ್ನಿಂಗ್ಸ್’ಗಳಲ್ಲಿ ಮನೀಶ್ ಪಾಂಡೆ ಗಳಿಸಿದ್ದು 31 ರನ್ (27 ಮತ್ತು 04). ಅತ್ತ ಮಯಾಂಕ್ ಅಗರ್ವಾಲ್ ಎರಡೂ ಇನ್ನಿಂಗ್ಸ್’ಗಳಲ್ಲಿ ಗಳಿಸಿದ ಸ್ಕೋರ್ 32 (10 ಮತ್ತು 22). ಇವರಿಬ್ಬರ ವೈಫಲ್ಯವೇ ಕರ್ನಾಟಕದ ಬ್ಯಾಟಿಂಗ್ ಕುಸಿತಕ್ಕೆ ಕಾರಣ.

ಕರ್ನಾಟಕ ತಂಡದ 2ನೇ ಇನ್ನಿಂಗ್ಸ್’ನಲ್ಲಿ 67 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್’ಗಿಳಿದಿದ್ದ ಮನೀಶ್ ಪಾಂಡೆ ನಾಯಕನಾಗಿ ಜವಾಬ್ದಾರಿಯುತ ಆಟವಾಡಬೇಕಿತ್ತು. ಆದರೆ ಇಲ್ಲದ ರನ್ ಕದಿಯಲು ಹೋಗಿ ರನೌಟಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದ್ರು. ಮಯಾಂಕ್ ಅಗರ್ವಾಲ್ ಕೂಡ ಅಷ್ಟೇ. ಕರ್ನಾಟಕ ತಂಡದ ಪರ ಆಡುವಾಗ ಟೀಮ್ ಇಂಡಿಯಾದ ಅನುಭವವನ್ನು ಬಳಸಿಕೊಳ್ಳಬೇಕಿದ್ದ ಮಯಾಂಕ್, 2ನೇ ಇನ್ನಿಂಗ್ಸ್’ನಲ್ಲಿ ಬೇಜವಾಬ್ದಾರಿಯುತ ಹೊಡೆತಕ್ಕೆ ಕೈ ಹಾಕಿ ಔಟಾಗಿದ್ರು.

ಇಂಗ್ಲೆಂಡ್ (India Vs England) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ (India Cricket Team) ಸ್ಥಾನ ಕಳೆದುಕೊಂಡಿರುವ ಮಯಾಂಕ್ ಅಗರ್ವಾಲ್’ಗೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್’ನಲ್ಲಿ ದೊಡ್ಡ ಮೊತ್ತ ಗಳಿಸಿ ಆಯ್ಕೆ ಸಮಿತಿಯ ಗಮನ ಸೆಳೆಯುವ ಅವಕಾಶವಿತ್ತು. ಆದರೆ ಸಿಕ್ಕ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಂಡಿದ್ದಾರೆ.

ತವರು ನೆಲದಲ್ಲೇ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತಿರುವ ಕರ್ನಾಟಕ ತಂಡ ಕನ್ನಡಿಗರಿಗೆ ಭಾರೀ ನಿರಾಶೆಯನ್ನುಂಟು ಮಾಡಿದೆ. ಈ ಪಂದ್ಯವನ್ನು ಗೆದ್ದಿದ್ದರೆ ಸೆಮಿಫೈನಲ್ ಪಂದ್ಯವನ್ನೂ ತವರು ನೆಲದಲ್ಲೇ ಆಡುವ ಅವಕಾಶವಿತ್ತು. ಫೈನಲ್ ಪಂದ್ಯವೂ ಬೆಂಗಳೂರಲ್ಲೇ ನಿಗದಿಯಾಗಿರುವ ಕಾರಣ, ತವರು ಮಣ್ಣಿನಲ್ಲಿ ಮತ್ತೊಮ್ಮೆ ರಣಜಿ ಟ್ರೋಫಿ ಎತ್ತಿ ಹಿಡಿಯುವ ಚಿನ್ನದಂತಹ ಅವಕಾಶ ಕರ್ನಾಟಕ ತಂಡದ ಮುಂದಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಸ್ಟಾರ್ ಆಟಗಾರರೇ ಕೈಕೊಟ್ಟಿದ್ದರಿಂದ ಮತ್ತೊಮ್ಮೆ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕ ತಂಡದ ಕನಸು ನುಚ್ಚು ನೂರಾಗಿದೆ. ಕರ್ನಾಟಕವನ್ನು 5 ವಿಕೆಟ್’ಗಳಿಂದ ಸೋಲಿಸಿದ ಉತ್ತರ ಪ್ರದೇಶ ಸೆಮಿಫೈನಲ್”ಗೆ ಲಗ್ಗೆಯಿಟ್ಟಿದೆ.

ಕರ್ನಾಟಕ Vs ಉತ್ತರ ಪ್ರದೇಶ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಪ್ರಥಮ ಇನ್ನಿಂಗ್ಸ್: 253 (ಆರ್.ಸಮರ್ಥ್ 57, ಶ್ರೇಯಸ್ ಗೋಪಾಲ್ ಅಜೇಯ 56, ಕರುಣ್ ನಾಯರ್ 29; ಸೌರಭ್ ಕುಮಾರ್ 73/4, ಶಿವಂ ಮಾವಿ 60/3)
ಉತ್ತರ ಪ್ರದೇಶ ಪ್ರಥಮ ಇನ್ನಿಂಗ್ಸ್: 155 (ಪ್ರಿಯಂ ಗಾರ್ಗ್ 39, ರಿಂಕು ಸಿಂಗ್ 33; ರೋನಿತ್ ಮೋರೆ 47/3, ವೈಶಾಖ್ ವಿ. 29/2, ವಿದ್ವತ್ ಕಾವೇರಪ್ಪ 19/2, ಕೆ.ಗೌತಮ್ 43/2)

ಕರ್ನಾಟಕ ದ್ವಿತೀಯ ಇನ್ನಿಂಗ್ಸ್: 114 (ಶರತ್ ಶ್ರೀನಿವಾಸ್ ಅಜೇಯ 23, ಮಯಾಂಕ್ ಅಗರ್ವಾಲ್ 22: ಸೌರಭ್ ಕುಮಾರ್ 36/3, ಯಶ್ ದಯಾಳ್ 35/2, ಅಂಕಿತ್ ರಜಪೂತ್ 15/2)

ಉತ್ತರ ಪ್ರದೇಶ ದ್ವಿತೀಯ ಇನ್ನಿಂಗ್ಸ್ : 213/5 (ಕರಣ್ ಶರ್ಮಾ ಅಜೇಯ 83, ಪ್ರಿಯಂ ಗಾರ್ಗ್ 52; ವೈಶಾಖ್ ವಿ. 47/3, ವಿದ್ವತ್ ಕಾವೇರಪ್ಪ 46/1, ಕೆ.ಗೌತಮ್ 49/1). ಉತ್ತರ ಪ್ರದೇಶಕ್ಕೆ 5 ವಿಕೆಟ್ ಗೆಲುವು.

Ranji Trophy defeat of Karnataka is due to Manish Pandey and Mayank Agarwal

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular