ಬೆಂಗಳೂರು: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್, ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಮುಂದಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಪರ ಆಡಲಿದ್ದಾರೆಯೇ..?
ನಾಲ್ಕು ದಿನಗಳ ಹಿಂದೆ ಲಕ್ನೋದ ಮೈದಾನದಲ್ಲಿ ನಡೆದ ಘಟನೆಯ ನಂತರ ಈ ರೀತಿಯ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ. ಇದಕ್ಕೆ ಸರಿಯಾಗಿ ಆರ್’ಸಿಬಿ ತಂಡ ಸೇರಿಕೊಳ್ಳುವಂತೆ ರಾಹುಲ್ ಅವರಿಗೆ ಓಪನ್ ಆಫರ್ ಕೂಡ ಸಿಕ್ಕಿದೆ.

ಕಳೆದ ಬುಧವಾರ ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜಯಂಟ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಗೆಲ್ಲಲು ಲಕ್ನೋ ಒಡ್ಡಿದ್ದ 166 ರನ್’ಗಳ ಟಾರ್ಗೆಟ್ ಅನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 9.4 ಓವರ್’ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿತ್ತು.
ಹೀನಾಯ ಸೋಲಿನ ನಂತರ ಲಕ್ನೋ ಸೂಪರ್ ಜಯಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ, (Lucknow Super Giants owner Sanjiv Goenka) ತಂಡದ ನಾಯಕ ರಾಹುಲ್ ಅವರ ಬಳಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ರಾಹುಲ್ ಅವರನ್ನು ಗೋಯೆಂಕಾ ನಿಂದಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಷ್ಟೇ ಅಲ್ಲ, ಒಬ್ಬ ಕ್ರಿಕೆಟಿಗನನ್ನು ಗೌರವಿಸಲು ಬಾರದ ಸಂಜೀವ್ ಗೋಯೆಂಕಾ ವಿರುದ್ಧ ಕ್ರಿಕೆಟ್ ಪ್ರಿಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಘಟನೆಯ ನಂತರ ಲಕ್ನೋ ತಂಡವನ್ನು ತೊರೆದು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಂತೆ ರಾಹುಲ್ ಅವರನ್ನು ಆರ್’ಸಿಬಿ (RCB) ಅಭಿಮಾನಿಗಳು ವಿನಂತಿಸಿಕೊಂಡಿದ್ದರು.
ಇದೀಗ RCB insider ಖ್ಯಾತಿಯ ಮಿಸ್ಟರ್ ನ್ಯಾಗ್ಸ್ ಕೂಡ ರಾಹುಲ್ ಅವರಿಗೆ ಆರ್’ಸಿಬಿ ಪರ ಆಡುವಂತೆ ಮನವಿ ಮಾಡಿದ್ದಾರೆ. ಆರ್’ಸಿಬಿ ಪರೋಡಿ ಪ್ರೆಸ್ ಕಾನ್ಫರೆನ್ಸ್’ನಲ್ಲಿ ತಮಾಷೆಯ ಧಾಟಿಯಲ್ಲಿ ಮಾತನಾಡಿರುವ ನ್ಯಾಗ್ಸ್, ‘’ನೀನು ಬಾರಪ್ಪ, ಇದು ನಿನ್ನದೇ ಮನೆ, ನಿನ್ನ ಸ್ಟೇಡಿಯಂ. ನೀನು ಇಲ್ಲಿಗೆ ಬಂದರೆ ಬೇಡ ಎನ್ನುವವರಿಲಿಲ್ಲ. ಇಲ್ಲಿ ನಿನ್ನನ್ನು ಯಾರೂ ಬೈಯುವುದೂ ಇಲ್ಲ’’ ಎಂದು ರಾಹುಲ್ ಅವರನ್ನು ಉದ್ದೇಶಿಸಿ ನ್ಯಾಗ್ಸ್ ಡೈಲಾಗ್ ಹೊಡೆದಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
No way Man RCB also wanted the Same thing to happen 😂
Mr Nags Said :- KL Come this side, it’s your home, your stadium, all are your people, your place and nobody will say anything to you and nobody will scold you either! 😂@klrahul will you Go ??#KLRahul #RCB pic.twitter.com/GssjpEwN4u
— 𝙎𝙤𝙣𝙪 ✨ (@KLfied_) May 11, 2024
32 ವರ್ಷದ ರಾಹುಲ್ 2013 ಮತ್ತು 2016ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2016ರ ಟೂರ್ನಿಯಲ್ಲಿ 400ಕ್ಕೂ ಹೆಚ್ಚು ರನ್ ಗಳಿಸುವ ಮೂಲ ಆರ್’ಸಿಬಿ ತಂಡ ಫೈನಲ್ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಭುಜದ ನೋವಿನ ಕಾರಣ 2017ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ರಾಹುಲ್, 2018, 2019, 2020 ಮತ್ತು 2021ರ ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2022ರಿಂದ ರಾಹುಲ್ ಲಕ್ನೋ ಸೂಪರ್ ಜಯಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ ಕಳೆದ ಎರಡು ಬಾರಿಯೂ ಪ್ಲೇ ಆಫ್ ಹಂತಕ್ಕೇರಿತ್ತು.
ಐಪಿಎಲ್ 2024 ಟೂರ್ನಿಯಲ್ಲಿ (IPL 2024) ಆಡಿರುವ 12 ಪಂದ್ಯಗಳಿಂದ 12 ಅಂಕ ಕಲೆ ಹಾಕಿರುವ ಲಕ್ನೋ ತಂಡ ಪ್ಲೇ ಆಫ್ ಹಂತಕ್ಕೇರಬೇಕಾದರೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ.