ನ್ಯೂ ಯಾರ್ಕ್: ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಟೀಮ್ ಇಂಡಿಯಾ ಆಟಗಾರರ ಫೇವರಿಟ್ ಹುಡುಗ. ಸದಾ ಒಂದಿಲ್ಲೊಂದು ತರಲೆ, ಕೀಟಲೆಗಳಿಂದ ಸಹ ಆಟಗಾರರನ್ನು ನಗಿಸುವ ಕ್ರಿಕೆಟಿಗ ರಿಷಭ್ ಪಂತ್. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿರುವ ರಿಷಭ್ ಪಂತ್, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup 2024) ಆಡುತ್ತಿದ್ದಾರೆ.

ಈಗಾಗಲೇ ಭಾರತ ತಂಡ ನ್ಯೂ ಯಾರ್ಕ್’ನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 8 ವಿಕೆಟ್’ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾನುವಾರ (ಜೂನ್ 9) ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : T20 World Cup 2024 India Vs Pakistan : ಇಂದು ಭಾರತ Vs ಪಾಕ್ ಮುಖಾಮುಖಿ, ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಕಂಪ್ಲೀಟ್ ಡೀಟೇಲ್ಸ್ !
ಟಿ20 ವಿಶ್ವಕಪ್ ಟೂರ್ನಿಯ ಮೂಲಕ ರಿಷಭ್ ಪಂತ್ ಒಂದೂವರೆ ವರ್ಷಗಳ ನಂತ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂ ಯಾರ್ಕ್’ನಲ್ಲಿ ಭಾರತ ತಂಡ ತಂಗಿರುವ ಹೋಟೆಲ್’ನ ಕಾರಿಡಾರ್’ನಲ್ಲಿ ರಿಷಭ್ ಪಂತ್ ಸೂರ್ಯಕುಮಾರ್ ಯಾದವ್ ಜೊತೆಗೂಡಿ ಕ್ರಿಕೆಟ್ ಬ್ಯಾಟ್’ನಲ್ಲಿ ಗಾಲ್ಫ್ ಆಡಿದ್ದಾರೆ. ಆ ವೀಡಿಯೊವನ್ನು ರಿಷಭ್ ಪಂತ್ ತಮ್ಮ ಇನ್ಸ್’ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

26 ವರ್ಷದ ರಿಷಭ್ ಪಂತ್ 2022ರ ಡಿಸೆಂಬರ್ 30ರಂದೂ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು, ಡಿವೈಡರ್’ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ಅಫಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ನಂತರ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆಗೊಳಲಾಗಿದ್ದ ರಿಷಭ್, ಕಳೆದ ಐಪಿಎಲ್ ಟೂರ್ನಿಯ ಮೂಲಕ ವೃತ್ತಿಪರ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ್ದರು.
ಇದನ್ನೂ ಓದಿ : Afghanistan Beat New Zealand: ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಬಿಗ್ ಶಾಕ್, ಕಿವೀಸ್ ಕಿವಿ ಹಿಂಡಿದ ಆಫ್ಘನ್ ಪಡೆ !
ಐಪಿಎಲ್-2024 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದ ಪಂತ್, 13 ಪಂದ್ಯಗಳಿಂದ 155.40 ಸ್ಟ್ರೈಕ್’ರೇಟ್’ನಲ್ಲಿ 3 ಅರ್ಧಶತಕಗಳ ಸಹಿತ 446 ರನ್ ಗಳಿಸಿದ್ದರು. ಬುಧವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸ್ಫೋಟಕ ಆಟವಾಡಿದ್ದ ರಿಷಭ್ ಪಂತ್, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದ್ದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಐರ್ಲೆಂಡ್, ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ (2/6), ಅರ್ಷದೀಪ್ ಸಿಂಗ್ (2/35) ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (3/27) ಅವರ ಮಾರಕ ದಾಳಿಗೆ ತತ್ತರಿಸಿ 16 ಓವರ್’ಗಳಲ್ಲಿ ಕೇವಲ 96 ರನ್’ಗಳಿಗೆ ಆಲೌಟಾಗಿತ್ತು. ನಂತರ ಸುಲಭ ಗುರಿ ಬೆನ್ನಟ್ಟಿದ್ದ ಭಾರತ 12.2 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 97 ರನ್ ಗಳಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 52 ರನ್ ಗಳಿಸಿ ಮಿಂಚಿದ್ದರು.
ಇದನ್ನೂ ಓದಿ : T20 World Cup Harmeet Singh: ಅಮೆರಿಕ ಪರ ಆಡುತ್ತಿದ್ದಾನೆ ಭಾರತದ U-19 ವಿಶ್ವಕಪ್ ಸ್ಟಾರ್ !
Rishabh Pant played golf with a cricket bat in the hotel corridor