ಬೆಂಗಳೂರು: (Robin Uthappa tearful story) ಕೊಡಗಿನ ಕುವರ, ಕರ್ನಾಟಕದ ಕ್ರಿಕೆಟ್ ದಿಗ್ಗಜ, 2007ರ ಐಸಿಸಿ ಟಿ20 ವಿಶ್ವಕಪ್ ವಿಜೇತ ತಂಡದ ಆಟಗಾರ ರಾಬಿನ್ ಉತ್ತಪ್ಪ, ತಮ್ಮ 20 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ರಾಬಿನ್ ಉತ್ತಪ್ಪ ಅವರ ಆಟ ಐಪಿಎಲ್’ನಲ್ಲೂ ಕಾಣ ಸಿಗುವುದಿಲ್ಲ. ಎಲ್ಲಾ ಮಾದರಿಯ ಕ್ರಿಕೆಟ್’ಗೆ ಉತ್ತಪ್ಪ ನಿವೃತ್ತಿ ಘೋಷಿಸಿದ್ದಾರೆ.
ರಾಬಿನ್ ಉತ್ತಪ್ಪ ಅವರ ಕ್ರಿಕೆಟ್ ಜೀವನನ್ನು ನೋಡಿದರೆ ಅಲ್ಲೊಂದಿಷ್ಟು ನೋವು-ನಲಿವು, ಏರಿಳಿತಗಳು ಕಾಣ ಸಿಗುತ್ತವೆ. 2006ರಲ್ಲಿ ಭಾರತ ಪರ ಮೊದಲ ಏಕದಿನ ಪಂದ್ಯವಾಡಿದ್ದ ರಾಬಿನ್ ಉತ್ತಪ್ಪ, ಇಲ್ಲಿಯವರೆಗೆ ಆಡಿರುವ ಒಟ್ಟು ಅಂತಾರಾಷ್ಟ್ರೀಯ ಪಂದ್ಯಗಳು ಕೇವಲ 59 ಅಷ್ಟೇ. 46 ಏಕದಿನ, 13 ಟಿ20. ರಾಬಿನ್ ಉತ್ತಪ್ಪ ಅವರಂತಹ ಪ್ರತಿಭಾವಂತ ಆಟಗಾರ ದೇಶದ ಪರ ಮತ್ತಷ್ಟು ಪಂದ್ಯಗಳನ್ನು ಆಡಬೇಕಿತ್ತು. ಆದರೆ ಅದೃಷ್ಟ ಕೈಹಿಡಿಯಲಿಲ್ಲ. ದುರದೃಷ್ಟದ ಜೊತೆ ರಾಬಿನ್ ಉತ್ತಪ್ಪ ಅವರ ಕ್ರಿಕೆಟ್ ಬದುಕಿಗೆ ಪೆಟ್ಟು ಕೊಟ್ಟದ್ದು ಅವರ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳು.
It has been my greatest honour to represent my country and my state, Karnataka. However, all good things must come to an end, and with a grateful heart, I have decided to retire from all forms of Indian cricket.
— Robin Aiyuda Uthappa (@robbieuthappa) September 14, 2022
Thank you all ❤️ pic.twitter.com/GvWrIx2NRs
ರಾಬಿನ್ ಉತ್ತಪ್ಪ ಭಾರತ ತಂಡದಲ್ಲಿ ಆಗಷ್ಟೇ ನೆಲೆಯೂರುತ್ತಿದ್ದ ಸಂದರ್ಭ. ಆಗ ಮನೆಯಲ್ಲಿ ತಂದೆ-ತಾಯಿಯ ಮಧ್ಯೆ ನಾನಾ ಕಾರಣಗಳಿಗೆ ಗಲಾಟೆಗಳು ನಡೆಯುತ್ತಿದ್ದವು. ಗಲಾಟೆ ಎಲ್ಲಿಯವರೆಗೆ ಹೋಗಿ ತಲುಪಿತ್ತು ಎಂದರೆ ಉತ್ತಪ್ಪ ಅವರ ತಾಯಿ ರೋಸ್ಲಿನ್ ಉತ್ತಪ್ಪ, ಗಂಡನ ವಿರುದ್ಧ ಕೊಡಗಿನ ಸುಂಟಿಕೊಪ್ಪ ಠಾಣೆಯಲ್ಲಿ ಕೇಸ್ ಹಾಕಿದ್ದೂ ಇದೆ. ಇದೆಲ್ಲಾ ರಾಬಿನ್ ಉತ್ತಪ್ಪ ಅವರ ಕ್ರಿಕೆಟ್ ಬದುಕಿಗೆ ಹೊಡೆತ ಕೊಟ್ಟವು. ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳು ಉತ್ತಪ್ಪ ಅವರನ್ನು ಮಾನಸಿಕವಾಗಿ ಜರ್ಝರಿತವಾಗಿಸಿ ಬಿಟ್ಟವು. ಆ ಘಟನೆಗಳ ಬಗ್ಗೆ ಸ್ವತಃ ಉತ್ತಪ್ಪ ಅವರೇ ಒಮ್ಮೆ ಹೀಗೆ ಹೇಳಿದ್ರು.
“ನಾನೀಗ ಈ ಹಂತದಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ನಾನು ಜೀವನದಲ್ಲಿ ಎದುರಿಸಿದ ಕಠಿಣ ಸಮಯ. ಆಗ ನಾನು ನಿಜಕ್ಕೂ ಮಾನಸಿಕ ಖಿನ್ನತೆಗೊಳಗಾಗಿದ್ದೆ, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯೂ ನನಗೆ ಬಂದಿತ್ತು. ನನಗೆ ಇನ್ನೂ ನೆನಪಿದೆ, 2009ರಿಂದ 2011.. ಆ ಅವಧಿ ನನ್ನ ಜೀವನದ ಅತ್ಯಂತ ಕರಾಳ ದಿನಗಳಾಗಿದ್ದವು. ಆ ಸಮಯದಲ್ಲಿ ನಾನು ಕ್ರಿಕೆಟ್ ಬಗ್ಗೆ ಯೋಚಿಸುವುದನ್ನೇ ಬಿಟ್ಟಿದೆ. ಈ ದಿನವನ್ನು ಕಳೆಯುವುದು ಹೇಗೆ ಎಂದಷ್ಟೇ ಯೋಚಿಸುತ್ತಿದ್ದೆ. ನನಗೇನಾಗಿದೆ? ನನ್ನ ಜೀವನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದೆಲ್ಲಾ ಯೋಚಿಸುತ್ತಾ ಕೂತಿರುತ್ತಿದ್ದೆ” ಎಂದು ಕೆಲ ವರ್ಷಗಳ ಹಿಂದೆ ಸ್ವತಃ ರಾಬಿನ್ ಉತ್ತಪ್ಪ ಅವರೇ ಹೇಳಿದ್ದರು.
ರಾಬಿನ್ ಉತ್ತಪ್ಪ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ ಆ ದಿನಗಳಲ್ಲಿ ಉತ್ತಪ್ಪ ಕಾರ್’ನಲ್ಲಿಯೇ ಮಲಗಿ ಸಾಕಷ್ಟು ರಾತ್ರಿಗಳನ್ನು ಕಳೆದದ್ದೂ ಇದೆ. ಹಲವಾರು ಬಾರಿ ರಣಜಿ ಟ್ರೋಫಿ ಪಂದ್ಯಗಳಿದ್ದಾಗ ಚಿನ್ನಸ್ವಾಮೀ ಕ್ರೀಡಾಂಗಣದ ಪಾರ್ಕಿಂಗ್’ನಲ್ಲಿ ಕಾರು ನಿಲ್ಲಿಸಿ ಅಲ್ಲೇ ರಾತ್ರಿ ಕಳೆದು, ಬೆಳಗ್ಗೆ ಡ್ರೆಸ್ಸಿಂಗ್ ರೂಮ್’ನಲ್ಲಿ ಸ್ನಾನ ಮಾಡಿ ಮ್ಯಾಚ್ ಆಡಿ, ಮತ್ತೆ ಕಾರ್’ನಲ್ಲಿಯೇ ನಿದ್ದೆ ಮಾಡಿದ ದಿನಗಳೂ ಇವೆ.
ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?
ಇದನ್ನೂ ಓದಿ : New Coach For Mumbai Indians: ಜಹೀರ್ ಖಾನ್, ಜಯವರ್ಧನೆಗೆ ಪ್ರಮೋಷನ್.. ಮುಂಬೈ ಇಂಡಿಯನ್ಸ್’ಗೆ ಬರಲಿದ್ದಾರೆ ಹೊಸ ಕೋಚ್
Robin Uthappa Sleeping in the car thoughts of suicide Do you know the tearful story of Robin Uthappa from Kodagu