ಕೊಲಂಬೋ : ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಕಂಡುಬಂದಿದ್ದು, ಕನ್ನಡಿಗ ದೇವದತ್ತ ಪಡಿಕ್ಕಲ್, ರುತುರಾಜ್ ಸಕಾರಿಯಾ ಹಾಗೂ ನಿತೀಶ್ ರಾಣಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಶಿಖರ್ ಧವನ್ ಜೊತೆ ರುತುರಾಜ್ ಗಾಯಕ್‌ವಾಡ್ ಕಣಕ್ಕೆ ಇಳಿಯಲಿದ್ದಾರೆ. ಮೊದಲ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ. ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಬ್ಯಾಟಿಂಗ್‌ನಲ್ಲಿ ಭಡ್ತಿ ನೀಡಲಾಗಿದ್ದು, ಕುಲದೀಪ್ ಯಾದವ್ ಎರಡನೇ ಟಿ20 ಪಂದ್ಯದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಂಡ್ಯ ಜೊತೆಗೆ ಸಂಪರ್ಕದಲ್ಲಿದ್ದ ಹಾರ್ದಿಕ್ ಪಾಂಡ್ಯ, ಪ್ರಥ್ವಿ ಶಾ, ಇಶಾನ್ ಕಿಶನ್, ದೀಪಕ್ ಚಹರ್, ಯಜುವೇಂದ್ರ ಚಹಾಲ್ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತ ತಂಡ ಹೊಸ ಮುಖಗಳೊಂದಿಗೆ ಶ್ರೀಲಂಕಾ ವಿರುದ್ದ ಕಾದಾಟಕ್ಕೆ ಇಳಿದಿದೆ. ಇನ್ನು ಶ್ರೀಲಂಕಾ ಕೂಡ ಒಂದೆರಡು ಬದಲಾವಣೆಗಳನ್ನು ಮಾಡಿಕೊಂಡಿದೆ.