Virat Kohli : ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಭಾರತ ತಂಡ ಶುಭಾರಂಭ ಮಾಡಿದೆ. ಬುಧವಾರ ನಡೆದ ಐರ್ಲೆಂಡ್ ವಿರುದ್ಧದ (India Vs Ireland) ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 8 ವಿಕೆಟ್’ಗಳ ಸುಲಭ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ (2/6), ಅರ್ಷದೀಪ್ ಸಿಂಗ್ (2/35) ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (3/27) ಅವರ ಮಾರಕ ದಾಳಿಗೆ ತತ್ತರಿಸಿ 16 ಓವರ್’ಗಳಲ್ಲಿ ಕೇವಲ 96 ರನ್’ಗಳಿಗೆ ಆಲೌಟಾಯಿತು.

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 12.2 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 97 ರನ್ ಗಳಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಭಾರತ ಪರ ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 52 ರನ್ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ವಿಕೆಟ್ ಕೀಪರ್ ರಿಷಭ್ ಪಂತ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು.
ಭಾರತ ಪರ ಆರಂಭಿಕನಾಗಿ ಕಣಕ್ಕಿಳಿದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli ) 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲೇ ಎಡವಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಒಬ್ಬ ಹೆಚ್ಚುವರಿ ಆಲ್ರೌಂಡರ್’ನನ್ನು ಆಡಿಸುವ ಉದ್ದೇಶದಿಂದ ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಜೊತೆ ಆರಂಭಿಕನಾಗಿ ಆಡುತ್ತಿದ್ದಾರೆ.
ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !
ಇದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಕೊನೆಯ ಟಿ20 ವಿಶ್ವಕಪ್ ಟೂರ್ನಿಯಾಗಿದೆ. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಧೋನಿ ಪಡೆಯ ಸದಸ್ಯನಾಗಿದ್ದ ರೋಹಿತ್ ಶರ್ಮಾ ನಂತರದ ಎಲ್ಲಾ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಭಾರತದ ಏಕೈಕ ಆಟಗಾರನೆನಿಸಿದ್ದಾರೆ.

ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.
ಇದನ್ನೂ ಓದಿ : Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !
ಐಸಿಸಿ ಟಿ20 ವಿಶ್ವಕಪ್ 2024: ಭಾರತದ ಮುಂದಿನ ಪಂದ್ಯಗಳು (ICC Men’s T20 World Cup 2024)
ಜೂನ್ 09: ಭಾರತ Vs ಪಾಕಿಸ್ತಾನ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 12: ಭಾರತ Vs ಅಮೆರಿಕ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 15: ಭಾರತ Vs ಕೆನಡಾ (ಲಾಡರ್’ಹಿಲ್, ರಾತ್ರಿ 8ಕ್ಕೆ)
Virat Kohli icc t20 world cup 2024 Kohli stumbled in the first match as an opener!