ಕಲಬುರಗಿ : ಭೂಮಿಯ ಮೇಲೆ ಸದ್ದು ಕೇಳುವುದು ಸರ್ವೆಸಾಮಾನ್ಯ. ಭೂಮಿ ಮೇಲೆ ಏನೇ ಶಬ್ಧಕೇಳಿದರೂ ಯಾರು ಅದನ್ನು ಅಷ್ಟಾಗಿ ತಲೆಗೆಹಾಕಿಕೊಳ್ಳದೇ ಸುಮ್ಮನಿರುತ್ತಾರೆ. ಆದರೆ ಇಲ್ಲಿ ಕೆಲ ಗ್ರಾಮಗಳಲ್ಲಿ ಭೂಮಿಯ ಒಳಗಿನಿಂದ ನಿಗೂಢ ಸದ್ದು ಕೇಳಿಬಂದಿದೆ. ಆ ಶಬ್ಧವನ್ನು ಕೇಳಿ ಅಲ್ಲಿನ ಜನರು ಹೆದರಿ, ನಿದ್ರಿಸಲಾಗದೆ, ರಸ್ತೆಯಲ್ಲಿ ಇಡೀ ರಾತ್ರಿ ಕಳೆದಿದ್ದಾರೆ.
ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಮಧ್ಯರಾತ್ರಿ 1.09 ನಿಮಿಷಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದ ಕಾರಣ ಜನರು ರಸ್ತೆಯಲ್ಲೇ ರಾತ್ರಿ ಕಳೆದರು. ತಾಲ್ಲೂಕಿನ ಗಡಿಕೇಶ್ವಾರ, ಕುಪನೂರ, ಕೆರೋಳ್ಳಿ, ಭಂಟನಳ್ಳಿ, ಬೆನಕನಳ್ಳಿ, ರಾಯಕೋಡ ಮೊದಲಾದ ಗ್ರಾಮಗಳಲ್ಲಿ ರಾತ್ರಿ ಮೂರು ಬಾರಿ ಭೂಮಿಯಿಂದ ಸದ್ದು ಕೇಳಿಸಿದೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲ್ಲೂಕು ಘಟಕದ ಮುಖಂಡ ರೇವಣಸಿದ್ದಪ್ಪ ಅಣಕಲ್ ತಿಳಿಸಿದರು.
ಮೊದಲಿಗೆ ಜೋರು ಸದ್ದು ಕೇಳಿ ಬಂದಾಗ, ನೆಲವೆಲ್ಲ ನಡುಗಿದಂತಾಯಿತು. ಹೆದರಿ ಮನೆಗಳಿಂದ ಹೊರ ಬಂದು ರಸ್ತೆಯಲ್ಲಿ ನಿಂತೆವು. ಆಗ ಮತ್ತೆ ಎರಡು ಬಾರಿ ಅಲ್ಪ ಪ್ರಮಾಣದ ಸದ್ದು ಭೂಮಿಯಿಂದ ಕೇಳಿಸಿತು ಎಂದು ಅವರು ಹೇಳಿದರು. ಕುಪನೂರ ಗ್ರಾಮದಲ್ಲೂ ಇದೇ ರೀತಿ ಸದ್ದು ಕೇಳಿ ಬಂದಿದ್ದರಿಂದ ಹೆದರಿಕೆಯಾಗಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ನಿಖರವಾಗಿ ಪತ್ತೆ ಮಾಡಿ, ಭಯ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೇವಯ್ಯ ಸ್ವಾಮಿ ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಜಕುಮಾರ ಪಾಟೀಲ ತೆಲ್ಕೂರ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿಯಾದರು. ಭೂಕಂಪನದ ಸದ್ದಿನಿಂದ ಆಗಿರುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಅವರು ಕೋರಿದರು. ಗ್ರಾಮಸ್ಥರ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವ ಮುರುಗೇಶ ನಿರಾಣಿ ಅವರು, ಖುದ್ದು ನಾನೇ ಗ್ರಾಮಕ್ಕೆ ಬಂದು ಪರಿಶೀಲಿಸುವೆ. ಉನ್ನತ ವಿಜ್ಞಾನಿಗಳನ್ನು ಕರೆ ತರುವೆ. ಸಾಧ್ಯವಾದರೆ ವಾಸ್ತವ್ಯ ಮಾಡುವೆ, ಭಯ ಪಡಬೇಡಿ ಎಂದರು
ಇದನ್ನೂ ಓದಿ: ದೇವರನ್ನು ಕಾಯುತ್ತೆ ಮೊಸಳೆ : ಇದು ತಿರುವನಂತರಪುರದ ಅನಂತ ಪದ್ಮನಾಭ ಸ್ವಾಮಿಯ ಮೂಲಸ್ಥಾನ