24 ಗಂಟೆ ಸೇವೆಗೆ ಅನುಮತಿ ನೀಡಿ : ಪೊಲೀಸ್ ಇಲಾಖೆಗೆ ಹೊಟೇಲ್‌ಮಾಲೀಕರ ಸಂಘದ ಮನವಿ

ಬೆಂಗಳೂರು : ಕೊರೋನಾ ಕಳೆದು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರೂ ಕೂಡ ವ್ಯಾಪಾರ ವ್ಯವಹಾರ ಇನ್ನೂ ಚೇತರಿಕೆ ಕಂಡಿಲ್ಲ. ಈ‌ಮಧ್ಯೆ ದಿನದ 24 ಗಂಟೆಯೂ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳನ್ನು ತೆರೆಯಲು ಇನ್ನೂ ನಿರ್ಬಂಧ ಮುಂದುವರೆದಿದ್ದು ಈ ನಿರ್ಬಂಧ ತೆರವುಗೊಳಿಸುವಂತೆ ಕೋರಿ ಈಗ ಹೊಟೇಲ್ ಮಾಲೀಕರ ಸಂಘ ಪೊಲೀಸ್ ಆಯುಕ್ತರ ಮೊರೆ ಹೋಗಿದೆ. ಈಗಾಗಲೇ ಅಂದ್ರೇ 2021 ರಲ್ಲೇ ರಾಜ್ಯ ಸರ್ಕಾರ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳನ್ನು ತೆರೆಯಲು ಅನುಮತಿ ನೀಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡ ಬೆಂಗಳೂರಿನ‌ ಹೊಟೇಲ್ ಮಾಲೀಕರ ಸಂಘ, ಈಗ ಕೊರೋನಾ ಪ್ರಮಾಣ ಕಡಿಮೆಯಾಗಿರೋದರಿಂದ ಹೊಟೇಲ್ ಗಳನ್ನು ದಿನದ 24 ಗಂಟೆಯೂ (Allow 24 hours service) ತೆರೆಯಲು ಅನುಮತಿ ಕೋರಿದೆ.

ಆದರೆ ಇದುವರೆಗೂ ಪೊಲೀಸ್ ಇಲಾಖೆ ಈ ಬೇಡಿಕೆಗೆ ಅಸ್ತು ಎಂದಿಲ್ಲ. ಹೀಗಾಗಿ ಈಗ ಮತ್ತೊಮ್ಮೆ ಹೊಟೇಲ್ ಮಾಲೀಕರ ಸಂಘ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾಗೆ ಪತ್ರ ಬರೆದಿದೆ. ಸರ್ಕಾರದ ಆದೇಶದಂತೆ 24/7 ಹೋಟೆಲ್ ಓಪನ್ ಅನುಮತಿ ನೀಡಿ. ರಾತ್ರಿ ಪಾಳಿಯ ಕೆಲಸದವರು ಊಟಕ್ಕಾಗಿ ಹೋಟೆಲ್ ನ್ನು ಅವಲಂಬಿಸಿದ್ದಾರೆ. ಇದಕ್ಕೆ ಅನುಕೂಲ ಆಗುವಂತೆ ಸರ್ಕಾರ ಆದೇಶ ಹೊರಡಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಸದ್ಯ ರಾತ್ರಿ 11 ಗಂಟೆಯ ತನಕ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶವಿದೆ. ಬಾರ್ ಗಳಿಗೂ ಇದೇ ನಿರ್ಬಂಧವಿದೆ. ಹೀಗಾಗಿ ನಿಯಮ ಸಡಿಲಿಸಿ ಊಟ ತಿಂಡಿಗಾಗಿ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಿಗೆ ದಿನದ 24 ಗಂಟೆಯೂ ಬಾಗಿಲು ತೆರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದೆ.

ಕೊರೋನಾದಿಂದ ಹೊಟೇಲ್ ಉದ್ಯಮ ಸಾಕಷ್ಟು ನಷ್ಟ ಕಂಡಿದ್ದು, ನೆಲಕಚ್ಚಿದೆ. ರಾಜ್ಯದಾದ್ಯಂತ ಸಾವಿರಕ್ಕೂ ಅಧಿಕ ಹೊಟೇಲ್ ಗಳು ಬಾಗಿಲು ಮುಚ್ಚಿವೆ. ಹೀಗಾಗಿ ಹೊಟೇಲ್ ಉದ್ಯಮದ ಚೇತರಿಕೆಗಾಗಿ ಈಗ ದಿನದ ೨೪ ಗಂಟೆ ಬಾಗಿಲು ತೆರೆಯಲು ಉದ್ಯಮದ ವತಿಯಿಂದ ಅನುಮತಿ ಕೋರಲಾಗುತ್ತಿದೆ. ಆದರೆ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಸರ್ಕಾರ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳನ್ನು ದಿನದ ೨೪ ಗಂಟೆಯೂ ತೆರೆಯಲು ಸೂಚಿಸಿದೆ. ಆದರೆ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಇದುವರೆಗೂ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅದೇ ಕಾರಣಕ್ಕೆ ಪೊಲೀಸ್ ಇಲಾಖೆಯೂ ಅನುಮತಿ ನೀಡಲು ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸದ್ಯ ದಿನದ 24 ಗಂಟೆಯೂ ಊಟ ತಿಂಡಿ ದೊರೆಯುವ ದಿನಗಳು ದೂರವಿದ್ದು, ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಮೇಲೆ ನಿರ್ಧಾರ ಅವಲಂಬಿಸಿದೆ.

ಇದನ್ನೂ ಓದಿ : ಕಾಡಿನಲ್ಲಿ ಮಜಾ ಮಾಡುತ್ತಿದ್ದ ಪ್ರೇಮಿಗಳ ಮೇಲೆ ಹುಲಿ ಅಟ್ಯಾಕ್​ : ಯುವಕ ಸಾವು, ಯುವತಿ ಸ್ಥಿತಿ ಗಂಭೀರ

ಇದನ್ನೂ ಓದಿ : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ ಹೊಸ ಗೈಡ್‌ಲೈನ್ಸ್‌

Allow 24 hours service Request of the Hotel Owners Association to the Police Department

Comments are closed.