Panchamasali Protest: ಪಂಚಮಸಾಲಿಗಳ ಅಂತಿಮ ಹೋರಾಟಕ್ಕೆ ಯತ್ನಾಳ್ ಕರೆ; ಡಿ.12ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ

ಬೆಳಗಾವಿ: Panchamasali Protest: ಮೀಸಲಾತಿ ಕುರಿತು ಪಂಚಮಸಾಲಿಗಳ ಅಂತಿಮ ಹೋರಾಟಕ್ಕೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಈ ವೇಳೆ ಮಾತನಾಡಿದ ಯತ್ನಾಳ್, ಡಿಸೆಂಬರ್ 12ಕ್ಕೆ ಎಲ್ಲರೂ ಬುತ್ತಿ ಕಟ್ಟಿಕೊಂಡು ಬನ್ನಿ, ಅಂತಿಮ ಹೋರಾಟ ಮಾಡೋಣ’ ಎಂದು ಕರೆ ನೀಡಿದರು.

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಅಪ್ಪ-ಮಗ ಏನೇನೋ ಮಾಡ್ತಾರೆ. ಅವರ ಬಳಿ ನಿಜವಾದ ಹಾವಿಲ್ಲ. ನನ್ನ ಬುಟ್ಟಿಯಲ್ಲಿ ಹಾವಿದೆ. ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಈ ಸಮಾವೇಶ ನಡೆಸಿದ್ದೇವೆಯೇ ಹೊರತು ಲೀಡರ್ ಆಗಲು ನಾವು ಬಂದಿಲ್ಲ. ನಾನು ಯಾರ ಕಾಲಿಗೂ ಬಿದ್ದಿಲ್ಲ. ವಾಜಪೇಯಿ, ಅಡ್ವಾಣಿ ಅವರಿಗಷ್ಟೇ ನಮಿಸಿದ್ದೇನೆ. ನಮ್ಮವರಿಗೆ ನಾನು ಹೇಳೋದೂ ಅದನ್ನೇ ಯಾರ ಕಾಲಿಗೆ ಬೀಳೋದನ್ನು ಬಿಟ್ಟುಬಿಡಿ ಎಂದರು.

ನಾವು ಹುಲಿಗಳು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಶಾಸಕ ಅರವಿಂದ ಬೆಲ್ಲದ ಗಟ್ಟಿಧ್ವನಿಯಲ್ಲಿ ಮಾತನಾಡಿದ್ದು ಸಂತೋಷದ ಸಂಗತಿ. ನಾವು ಯಾರಿಗೂ ಹೆದರುವುದಿಲ್ಲ. ಆದರೆ ಯಾರಿಗೂ ಕೆಟ್ಟ ಮಾತನ್ನು ಆಡೋದೂ ಬೇಡ ಎಂದರು. ಕೆಲ ಮಂತ್ರಿಗಳು ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ನಮ್ಮ ಎಲ್ಲಾ ಮಾಹಿತಿಗಳು ಸಿಎಂ ಬೊಮ್ಮಾಯಿ ಬಳಿ ಹೋಗುತ್ತೆ. ನನ್ನನ್ನು ಪಕ್ಷದಿಂದ ಹೇಗೆ ಹೊರಹಾಕಬೇಕು ಅನ್ನೋ ಚರ್ಚೆಗಳೂ ನಡೆದಿರುತ್ತವೆ. ಆದರೆ ನನ್ನನ್ನು ಏನೂ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ಮಂತ್ರಿಪಟ್ಟ ಬೇಕಾಗಿಲ್ಲ. ಆದರೆ ಮೀಸಲಾತಿ ಮಾತ್ರ ತಂದೇ ತರುತ್ತೇನೆ ಅಂತ ಯತ್ನಾಳ್ ಸವಾಲೊಡ್ಡಿದರು.

ಡಿ.12ರಂದು “ಪಂಚಮಸಾಲಿ ನಡಿಗೆ ವಿಧಾನಸೌಧ ಒಳಗೆ” : ಇನ್ನು ಇದೇ ಸಂದರ್ಭ ಮಾತನಾಡಿದ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಡಿ.12ರಂದು “ಪಂಚಮಸಾಲಿ ನಡಿಗೆ ವಿಧಾನಸೌಧ ಒಳಗೆ” ಕಾರ್ಯಕ್ರಮ ಹಮ್ಮಿಕೊಂಡಿದ್ದು, 25 ಲಕ್ಷ ಪಂಚಮಸಾಲಿಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು. ಒಂದು ಸಮಾಜಕ್ಕೆ ಮೀಸಲಾತಿ ನೀಡಿ ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಲಾಗಿದೆ. ಹೀಗಾಗಿ ಡಿ.12ರಂದು ಬೃಹತ್ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಮಂಡಿಸುವುದಾಗಿ ಎಚ್ಚರಿಕೆಯನ್ನು ನೀಡಿದರು.

ನಮ್ಮ ಸಮುದಾಯದ ಯಾರ ಬಗ್ಗೆಯೂ ಹಗುರವಾದ ಮಾತು ಬೇಡ. ಯಾರನ್ನೂ ಅಗೌರವವಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಮ್ಮ ಸಮಾಜದ ನಾಯಕರೊಂದಿಗೆ ಇಡೀ ಸಮುದಾಯವಿದೆ. ನಮ್ಮ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದರೆ ಸುಮ್ಮನಿರಲ್ಲ. ಯಾರಾದರೂ ಪಿತೂರಿ ನಡೆಸಿದರೆ ಸಿಡಿದೇಳುವುದು ಖಂಡಿತ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ನಾಯಕರ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಪರೋಕ್ಷವಾಗಿ ಗುಡುಗಿದರು.

ಇದನ್ನೂ ಓದಿ: 2nd PU EXAM DATE: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ: Ramya Come Back : ರಮ್ಯ ಕಮ್ ಬ್ಯಾಕ್ ಡೌಟ್ : ಇನ್ ಸ್ಟಾಗ್ರಾಂ ನಲ್ಲಿ ಹೊರಬಿತ್ತು ಕಹಿಸತ್ಯ

BJP MLA Yatnal calls for final Panchamasali protest on December 12th

Comments are closed.