ಬೆಂಗಳೂರು : ಕರುನಾಡಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯ ಕೂಗು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಂದು ಸಂಜೆ 6 ಗಂಟೆಗೆ ಮಹತ್ವದ ಸಭೆ ಕರೆದಿದ್ದು, ರಾಜ್ಯದ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ.
ಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಒಂದೆಡೆ ಬೆಡ್ ಕೊರತೆ, ಇನ್ನೊಂದೆಡೆ ಆಮ್ಲಜನಕವಿಲ್ಲದೇ ಸಾಯುತ್ತಿರುವವರ ಸಂಖ್ಯೆ, ಸಾಲದಕ್ಕೆ ಸ್ಮಶಾನಗಳ ಮುಂದೆ ಸಾಲಾಗಿ ನಿಂತಿರುವ ಶವಗಳ ಸಾಲು. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ನಿಯಂತ್ರಣಕ್ಕೆ ಕರ್ಪ್ಯೂ ಜಾರಿ ಮಾಡಿದ್ದರೂ ಕೂಡ ಕಾಟಚಾರಕ್ಕೆ ಮಾತ್ರವೇ ಜಾರಿ ಮಾಡಿದಂತಿದೆ. ಕೊರೊನಾ ಕರ್ಪ್ಯೂ ಜಾರಿಯಲ್ಲಿದ್ದರೂ ಕೂಡ ಜನರು ಮಾತ್ರ ಭಯವಿಲ್ಲದೇ ಹೊರಗೆ ಬರುತ್ತಿದ್ದಾರೆ.
ಕೊರೊನಾ ಕರ್ಪ್ಯೂ, ನೈಟ್ ಕರ್ಪ್ಯೂ ಮಾಡಿ ಕೈಸುಟ್ಟುಕೊಂಡಿರುವ ರಾಜ್ಯ ಸರಕಾರದ ವಿರುದ್ದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಶಾಸಕರೂ ಕೂಡ ಲಾಕ್ ಡೌನ್ ಮಾಡೋಕ್ಕೆ ಒಲವು ತೋರಿದ್ದಾರೆ. ಜನಸಾಮಾನ್ಯರು ಕೂಡ ಲಾಕ್ ಡೌನ್ ಮಾಡಿ ಅನ್ನೋ ಆಗ್ರಹ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಜನತಾ ಕರ್ಪ್ಯೂವಿನ ಭಜನೆ ಮಾಡುತ್ತಿದೆ. ಲಾಕ್ ಡೌನ್ ಹೊರತು ರಾಜ್ಯಕ್ಕೆ ಗಂಡಾಂತರವಾಗುವ ವರದಿಯನ್ನು ತಜ್ಞರು ನೀಡುತ್ತಿದ್ದಂತೆಯೇ ಸಿಎಂ ಯಡಿಯೂರಪ್ಪ ಸಭೆ ಕರೆದಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಈಗಾಗಲೇ ಲಾಕ್ ಡೌನ್ ಜಾರಿ ಮಾಡುವ ಕುರಿತು ಸಿದ್ದತೆ ಮಾಡಿಕೊಂಡಿವೆ. ಜೊತೆಗೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಐಸಿಯು, ವೆಂಟಿಲೇಟರ್ ಸಮಸ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುತಾರಂ ಲಾಕ್ ಡೌನ್ ಜಾರಿ ಮಾಡಲು ಮನಸ್ಸು ಮಾಡುತ್ತಿಲ್ಲ. ಯಾವುದೋ ಒತ್ತಡಕ್ಕೆ ಮಣಿದಂತೆ ಭಾಸವಾಗುತ್ತಿದೆ. ಹೀಗಾದ್ರೆ ಜನತಾ ಕರ್ಪ್ಯೂವನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆಯಿದೆ. ಮೇ 12ರ ನಂತರದಲ್ಲಿ ಲಾಕ್ ಡೌನ್ ಹೇರಿಕೆ ಮಾಡುವ ಚಿಂತನೆಯೂ ರಾಜ್ಯ ಸರಕಾರಕ್ಕಿದ್ದು, ಕೇಂದ್ರ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋದನ್ನು ಕಾದು ನೋಡುತ್ತಿದೆ.
