Meter Security fee Hike : ವಿದ್ಯುತ್ ಮೀಟರ್ ಭದ್ರತಾ ಶುಲ್ಕ ಹೆಚ್ಚಳ : ಬೆಸ್ಕಾಂ ನಿರ್ಧಾರಕ್ಕೆ ಬೆಂಗಳೂರಿಗರ ಆಕ್ರೋಶ

ಬೆಂಗಳೂರು : ಈಗಾಗಲೇ ಪೆಟ್ರೋಲ್, ಡಿಸೇಲ್, ಚಿನ್ನ, ತರಕಾರಿ, ವಿದ್ಯುತ್ ಉಪಕರಣ,ಕೊನೆಗೆ ವಿದ್ಯುತ್ ದರವೂ ಕೈ ಸುಡಲಾರಂಭಿಸಿದೆ. ಒಂದು ಕಪ್ ಟೀ ದರವೂ ಜನಸಾಮಾನ್ಯನ ಜೇಬು ಕತ್ತರಿಸುವಷ್ಟಾಗಿದ್ದು, ಕೊರೋನಾ ಉದ್ಯೋಗ ನಷ್ಟ ಸೇರಿದಂತೆ ನೊರೆಂಟು ಕಾರಣಕ್ಕೆ ಹೈರಾಣಾಗಿರುವ ಜನರಿಗೆ ರಾಜ್ಯ ಕೇಂದ್ರ ಸರ್ಕಾರಗಳು ಒಂದಾದ‌ ಮೇಲೊಂದರಂತೆ ಶಾಕ್ ನೀಡುತ್ತಲೇ ಇವೆ. ಈ ಮಧ್ಯೆ ಈಗ ಬೆಸ್ಕಾಂ ಕೂಡ ಮತ್ತೊಂದು ಶಾಕ್ (Meter Security fee Hike) ನೀಡಲು ಸಜ್ಜಾಗಿದೆ.

ಈಗಾಗಲೇ ಬಿರು ಬೇಸಿಗೆಯ ಆರಂಭದಲ್ಲೇ ವಿದ್ಯುತ್ ದರ ಏರಿಸಿದ್ದ ಕರ್ನಾಟಕ ವಿದ್ಯುತ್ ನಿಗಮ ಈಗ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್ ನೀಡಲು ಸಿದ್ಧವಾಗಿದೆ. ವಿದ್ಯುತ್ ದರ ಏರಿಕೆ ಬಳಿಕ ಈಗ ಮೀಟರ್ ಡೆಪಾಸಿಟ್ ಮೊತ್ತವನ್ನೂ ಏರಿಸಿ ಬೆಸ್ಕಾಂ ಆದೇಶ ಹೊರಡಿಸಿದೆ. ಬೆಸ್ಕಾಂ ಮನೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬಳಸುವ ವಿದ್ಯುತ್ ಮೀಟರ್ ನ ಭದ್ರತಾ ಠೇವಣಿ ಮೊತ್ತ ಹೆಚ್ಚಿಸಿದೆ. ಈ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಪ್ರತಿಯೊಂದು ಮನೆಗೂ 30 ದಿನಗಳ ಡೆಡ್ ಲೈನ್ ನೀಡಲಾಗಿದ್ದು ನಿಗದಿತ ಅವಧಿಯೊಳಗೆ ಭದ್ರತಾ ಶುಲ್ಕ ಪಾವತಿಯಾಗದೇ ಇದ್ದರೆ ವಿದ್ಯುತ್ ಸಂಪರ್ಕ ನಿಲ್ಲಿಸುವುದಾಗಿ ಬೆಸ್ಕಾಂ ಹೇಳಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಬೆಸ್ಕಾಂ ಭದ್ರತಾ ಶುಲ್ಕವನ್ನು ಹೆಚ್ಚಿಸುತ್ತದೆ. ಅದರಂತೆ ಈ ವರ್ಷವೂ ಬೆಸ್ಕಾಂ ಭದ್ರತಾ ಶುಲ್ಕ ಹೆಚ್ಚಿಸಿದೆ. KERC ಆದೇಶದಂತೆ ಡೆಪಾಸಿಟ್ ಶುಲ್ಕ ಹೆಚ್ಚಿಸಿ ಹಣ ಪಾವತಿಸುವಂತೆ ಮನೆಗಳಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಬೆಸ್ಕಾಂ ಸೂಚಿಸಿದೆ. 2021ರ 12 ತಿಂಗಳ ಒಟ್ಟು ವಿದ್ಯುತ್ ಶುಲ್ಕದ ಮಾಸಿಕ ಸರಾಸರಿ ಶುಲ್ಕವನ್ನ ಪಡೆದು, 2 ತಿಂಗಳ ಸರಾಸರಿ ಶುಲ್ಕವನ್ನ ಭದ್ರತಾ ಠೇವಣಿ ರೀತಿ ಸಂಗ್ರಹಿಸಲಾಗುತ್ತೆ. ಉದಾಹರಣೆಗೆ ಒಂದು ಮನೆಯ ವಿದ್ಯುತ್ ಬಿಲ್ 500 ರೂ. ಬಂದರೆ ಅವರು 1000 ಸಾವಿರ ರೂಪಾಯಿ ಠೇವಣಿ ಹಣ ಪಾವತಿಸಬೇಕು.

ವಿದ್ಯುತ್ ಮೀಟರ್ ಭದ್ರತಾ ಶುಲ್ಕ ಹೆಚ್ಚಿಸಿರೋ ಬೆಸ್ಕಾಂ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಸ್ಕಾಂ ವಿದ್ಯುತ್ ಪೊರೈಕೆಯಲ್ಲಿ ನಿರಂತರ ಕಣ್ಣಾಮುಚ್ಚಾಲೆ ಆಟವಾಡಲು ಪ್ರಾರಂಭಿಸಿದೆ. ಆದರೆ ದರ ಏರಿಕೆಯಲ್ಲಿ ಮಾತ್ರ ಸದಾ ಮುಂದಿದ್ದು, ಒಂದಾದ ಮೇಲೊಂದರಂತೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಎಂದು ಜನ ಸಾಮಾನ್ಯರು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ :  ಸಿಲಿಕಾನ್‌ ಸಿಟಿಗೆ ಮಾಲಿನ್ಯದಿಂದ ಆತಂಕ : ಸ್ತ್ರೀಯರ ಆರೋಗ್ಯದ ಬಗ್ಗೆ ಹೊರಬಿತ್ತು ಆತಂಕಕಾರಿ ಮಾಹಿತಿ

ಇದನ್ನೂ ಓದಿ : ಬಿಬಿಎಂಪಿಯ 51 ಆಸ್ಪತ್ರೆಗಳು ಆರೋಗ್ಯ ಇಲಾಖೆ ಸುಪರ್ದಿಗೆ

Electricity meter security fee hike, Bengaluru Peoples outrage over Bescom decision

Comments are closed.